ಯಕೃತ್ತಿನ ಉರಿಯೂತ
ಯಕೃತ್ತಿನ ಉರಿಯೂತ ಎಂಬುದು ಸಾಧಾರಣವಾಗಿ ವಿಶಿಷ್ಟ ಬಗೆಯ ವೈರಸ್ಸುಗಳ ಸೋಂಕಿನಿಂದ ಉಂಟಾಗುವ ಯಕೃತ್ತಿನ ಉದ್ರಿಕ್ತಸ್ಥಿತಿ ಹಾಗೂ ಊತ (ವೈರಲ್ ಹೆಪಟೈಟಿಸ್).[೧][೨] ಸಾಮಾನ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡಬರುವುದು. ಆದರೂ ಈ ರೋಗ ಮಧ್ಯಮ ಹಾಗೂ ಧನಿಕ ಜನ ನೆಮ್ಮದಿಯಿಂದ ವಾಸಿಸುವ ಚೊಕ್ಕಟವಾದ ಬಡಾವಣೆಗಳಲ್ಲೂ ಕಂಡುಬರುತ್ತದೆ. ರೋಗ ಎರಡು ಬಗೆಯ ವೈರಸ್ಸುಗಳಿಂದ (A ಮತ್ತು B) ಉಂಟಾಗುತ್ತದೆ.
A ಬಗೆಯ ವೈರಸ್ಸಿನ ಸೋಂಕು
[ಬದಲಾಯಿಸಿ]A ಬಗೆಯ ವೈರಸ್ಸಿನ ಸೋಂಕು ಕೊಳಚೆ ಪ್ರದೇಶಗಳಲ್ಲಿ ಸಾಮಾನ್ಯ. ಸಾಧಾರಣವಾಗಿ ಇಪ್ಪತ್ತೈದು ವರ್ಷ ವಯಸ್ಸಿನೊಳಗಿರುವ ವ್ಯಕ್ತಿಗಳಿಗೆ ಅಂಟುಬರುತ್ತದೆ.
ಹರಡುವ ಬಗೆ: ಮುಖ್ಯವಾಗಿ ಮಲದಿಂದ ಕಲುಷಿತವಾದ ಆಹಾರದ ಬಳಕೆಯಿಂದ ರೋಗ ಹರಡುತ್ತದೆ.
ರೋಗಲಕ್ಷಣಗಳು: ಸೋಂಕು ಅಂಟಿದ 2-6 ವಾರಗಳಷ್ಟು ಹೊದಗು ಕಾಲಾನಂತರ (ಇನ್‌ಕ್ಯುಬೇಷನ್ ಪೀರಿಯಡ್) ಅಲ್ಪ ಜ್ವರದಿಂದ ಕೂಡಿ ರೋಗ ಕಾಣಿಸಿಕೊಳ್ಳುತ್ತದೆ.[೩] ಇರಸುಮುರಸು (ಮೆಲೇನ್) ತಲೆನೋವು, ಓಕರಿಕೆ, ನಿತ್ರಾಣ ಹೊಟ್ಟೆತೊಳಸು ಇವು ಇತರ ಲಕ್ಷಣಗಳು. ಯಕೃತ್ತಿನ ಗಾತ್ರ ವೃದ್ಧಿಯಾಗಿರುವುದು ವಿಶಿಷ್ಟ ಲಕ್ಷಣ. ನಾಲ್ಕಾರು ದಿವಸಗಳ ತರುವಾಯ ಕಾಮಾಲೆ ತಲೆದೋರುತ್ತದೆ. ಮುಖ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವ ರೋಗದ ಈ ಹಂತದಲ್ಲಿ ಮೇಲೆ ಹೇಳಿರುವ ಜ್ವರ ಇತ್ಯಾದಿ ಲಕ್ಷಣಗಳು ಕಡಿಮೆ ಆದರೂ ಮುಂದೆ ಕ್ರಮೇಣ ಊಟ ಸೇರದಿರುವಿಕೆ, ಓಕರಿಕೆ ಮತ್ತು ನಿಶ್ಯಕ್ತಿಗಳು ಹೆಚ್ಚಾಗಿರುತ್ತ ವ್ಯಕ್ತಿ ತೀರ ಅಸ್ವಸ್ಥವಾಗುವುದಿದೆ. ಬೆವರು ಮತ್ತು ಮೂತ್ರ ಕೂಡ ಹಳದಿ ಬಣ್ಣವಾಗಿ ನಿಧಾನವಾಗಿ ವಾಸಿ ಆಗುತ್ತದೆ. ವ್ಯಕ್ತಿಯ ಆಹಾರಪೇಕ್ಷೆ ಜೀರ್ಣಶಕ್ತಿ ಇವು ಕ್ರಮೇಣ ಮಾಮೂಲಿನ ಹಂತಕ್ಕೆ ಬರುತ್ತದೆ. ಹಾಗೆಯೇ ಕಣ್ಣು, ಮೈಗಳ ಹಳದಿ ಬಣ್ಣವೂ ನಿಧಾನವಾಗಿ ಮಾಯವಾಗುತ್ತದೆ. ಆದರೆ ಅಪರೂಪವಾಗಿ ಯಕೃತ್ತಿನ ಹಠಾತ್ ನಿಷ್ಕ್ರಿಯೆಯಿಂದ ವ್ಯಕ್ತಿ ಮೃತನಾಗಬಹುದು. ಇಲ್ಲವೇ ಯಕೃತ್ತು ನಾರುಗಟ್ಟಿ ಕಾಲ ಕ್ರಮೇಣ ತನ್ನ ಕ್ರಿಯಾಸಾಮರ್ಥ್ಯ ಕಳೆದುಕೊಳ್ಳುತ್ತ ಮರಣವನ್ನು ಉಂಟುಮಾಡಬಹುದು. ಹೀಗಾಗುವುದು ಶೇ 5 ರೋಗಿಗಳಲ್ಲಿ ಮಾತ್ರ.
B ಬಗೆಯ ವೈರಸ್ಸಿನ ಸೋಂಕು
[ಬದಲಾಯಿಸಿ]B ಬಗೆಯ ವೈರಸ್‌ನಿಂದ ಉಂಟಾಗುವ ಉರಿಯೂತದಲ್ಲೂ ಇದೇ ಲಕ್ಷಣ ಮತ್ತು ಹಂತಗಳು ಇರುತ್ತದೆ. ಆದರೆ ಹಲವು ಮುಖ್ಯ ವ್ಯತ್ಯಾಸಗಳಿರುವುದನ್ನು ಗಮನಿಸಬೇಕು.
ಹರಡುವ ಬಗೆ: ಈ ಬಗೆಯ ವೈರಸ್‌ನ ಸೋಂಕು ಉಂಟಾಗುವುದು ಕಾರಣಾಂತರಗಳಿಂದ ರೋಗಿಯ ರಕ್ತ ಇನ್ನೊಬ್ಬ ವ್ಯಕ್ತಿಯ ದೇಹದ ಒಳಹೊಕ್ಕಾಗ ಮಾತ್ರ (ರಕ್ತ ವರ್ಗಾವಣೆ). ಸಾಕ್ಷಾತ್ ರಕ್ತ ಮಿಶ್ರಣ ಆಗದಿದ್ದರೂ ರೋಗಿಷ್ಠ ರಕ್ತದ ಸಂಪರ್ಕ ಹೊಂದಿದ ಹತ್ಯಾರುಗಳು (ಚುಚ್ಚುಮದ್ದಿನ ಸೂಜಿ, ಚಾಕು, ಕತ್ತರಿ ಇತ್ಯಾದಿ) ಸೋಂಕನ್ನು ಅಂಟಿಸಬಲ್ಲವು. ಗರ್ಭಿಣಿಸ್ತ್ರೀಯಲ್ಲಿ ಹೊಕ್ಕಳಬಳ್ಳಿ ಮೂಲಕ ತಾಯಿಯಿಂದ ಸೋಂಕು ಭ್ರೂಣಕ್ಕೆ ತಗಲುವುದಿದೆ. ಸಲಿಂಗ ಮೈಥುನದ ಮೂಲಕವೂ ಸೋಂಕು ಹರಡುವುದು ತಿಳಿದುಬಂದಿವೆ.[೪] ಆದರೆ ಮಲ ಕಲುಷಿತ ನೀರು ಮತ್ತು ಆಹಾರಗಳಿಂದ ಈ ಬಗೆಯ ವೈರಸ್‌ನ ಸೋಂಕು ಹರಡುವುದೇ ಇಲ್ಲ. ಸೋಂಕು ಉಂಟಾದ ಮೇಲೆ 2-4 ತಿಂಗಳುಗಳಷ್ಟು ದೀರ್ಘವಾಗಿ ಇದರ ಹೊದಗು ಕಾಲವಿದೆ. ರೋಗ ಯಾವ ವಯಸ್ಸಿನ ವ್ಯಕ್ತಿಗಾದರೂ ತಗಲುವುದಿದೆ.
ಯಾವ ಆಹಾರ ಕೊಡುವುದು?
[ಬದಲಾಯಿಸಿ]ಯಾವ ಬಗೆಯ ವೈರಸ್ಸಿನಿಂದ ರೋಗ ಉಂಟಾಗಿದ್ದರೂ ಯಕೃತ್ತಿಗೆ ತೀವ್ರ ಧಕ್ಕೆ ಆಗಬಹುದು. ಯಕೃತ್ತಿಗೆ ರಕ್ಷಣೆ ಒದಗಿಸುವ ಮತ್ತು ಸುಲಭವಾಗಿ ಜೀರ್ಣಿಸಿ ರಕ್ತಗತವಾಗುವ ಸಕ್ಕರೆ ಪಿಷ್ಟಪದಾರ್ಥಗಳನ್ನು ಅಗತ್ಯವಾಗಿ ಕೊಡಬೇಕು. ಜಿಡ್ಡು ಪದಾರ್ಥಗಳು ಸಾಮಾನ್ಯವಾಗಿ ವರ್ಜ್ಯ ಎನ್ನಿಸಿವೆ.
ರೋಗಕ್ಕೆ ಮದ್ದು ಮತ್ತು ಲಸಿಕೆ
[ಬದಲಾಯಿಸಿ]ರೋಗ ಚಿಕಿತ್ಸೆಗೆ ವಿಶಿಷ್ಟವಾದ ಮದ್ದು ಯಾವುದೂ ಇನ್ನೂ ತಿಳಿದು ಬಂದಿಲ್ಲ. ಪಿಡುಗು ಕಾಲಗಳಲ್ಲಿ ರೋಗ ಬಾರದಂತೆ ವಿಶಿಷ್ಟ ಲಸಿಕೆಗಳನ್ನು ಚುಚ್ಚುಮದ್ದಾಗಿ ಬಳಸುವುದು ಉತ್ತಮ.
ಉಲ್ಲೇಖಗಳು
[ಬದಲಾಯಿಸಿ]- ↑ "National Library of Medicine » Medical Subject Headings »Virus Diseases (C02) » Hepatitis, Viral, Human (C02.440) » Scope Note".
- ↑ "Hepatitis | MedlinePlus" (in ಇಂಗ್ಲಿಷ್). Retrieved 2017-06-23.
- ↑ "CDC Hepatitis A FAQ". Retrieved 2008-03-03.
- ↑ "Hepatitis B". World Health Organization. Retrieved 5 October 2021."Hepatitis C". World Health Organization. Retrieved 5 October 2021.