ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಶೇಷ ಬರಹಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟದಲ್ಲಿ ವಿಶೇಷ ಬರಹಗಳ ಹಳೆಯ ಸಂಚಿಕೆಗಳನ್ನು ಪಟ್ಟಿ ಮಾಡಲಾಗಿದೆ.

  1. ಸಂಚಿಕೆ ೧: ಕೂಡ್ಲಿ
  2. ಸಂಚಿಕೆ ೨: ವಿಜಯನಗರ
  3. ಸಂಚಿಕೆ ೩: ಲಾಲ್ ಬಹಾದುರ್ ಶಾಸ್ತ್ರಿ
  4. ಸಂಚಿಕೆ ೪: ಕೃಷ್ಣರಾಜಸಾಗರ
  5. ಸಂಚಿಕೆ ೫: ಕ್ರಿಸ್ಮಸ್
  6. ಸಂಚಿಕೆ ೬: ಶ್ರೀನಿವಾಸ ರಾಮಾನುಜನ್
  7. ಸಂಚಿಕೆ ೭: ಖಜುರಾಹೊ
  8. ಸಂಚಿಕೆ ೮: ಮಹಾಭಾರತ
  9. ಸಂಚಿಕೆ ೯: ಮೈಸೂರು
  10. ಸಂಚಿಕೆ ೧೦: ಮೌರ್ಯ ಸಾಮ್ರಾಜ್ಯ
  11. ಸಂಚಿಕೆ ೧೧: ತಾಜ್ ಮಹಲ್
  12. ಸಂಚಿಕೆ ೧೨: ಜಿ. ಪಿ. ರಾಜರತ್ನಂ
  13. ಸಂಚಿಕೆ ೧೩: ಯಾವುದೂ ಇಲ್ಲ
  14. ಸಂಚಿಕೆ ೧೪: ಯಕ್ಷಗಾನ
  15. ಸಂಚಿಕೆ ೧೫: ಚದುರಂಗ
  16. ಸಂಚಿಕೆ ೧೬: ಮೋಹನ್ ದಾಸ್ ಕರಮ್ಚಂದ್ ಗಾಂಧಿ
  17. ಸಂಚಿಕೆ ೧೭: ಮೈಸೂರು ಸಂಸ್ಥಾನ
  18. ಸಂಚಿಕೆ ೧೮: ವುಲ್ಫ್ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್
  19. ಸಂಚಿಕೆ ೧೯: ಅ. ನ. ಕೃಷ್ಣರಾಯರು
  20. ಸಂಚಿಕೆ ೨೦: ಡಾ. ರಾಜ್ಕುಮಾರ್
  21. ಸಂಚಿಕೆ ೨೧: ಸರ್ದಾರ್ ವಲ್ಲಭಭಾಯ್ ಪಟೇಲ್
  22. ಸಂಚಿಕೆ ೨೨: ಅನಿಲ್ ರಾಧಾಕೃಷ್ಣ ಕುಂಬ್ಳೆ
  23. ಸಂಚಿಕೆ ೨೩: ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
  24. ಸಂಚಿಕೆ ೨೪: ಕರಿಮೆಣಸು
  25. ಸಂಚಿಕೆ ೨೫: ಉಪ್ಪಿನ ಸತ್ಯಾಗ್ರಹ
  26. ಸಂಚಿಕೆ ೨೬: ರಾಮಾಯಣ
  27. ಸಂಚಿಕೆ ೨೭: ಬ್ರೆಜಿಲ್
  28. ಸಂಚಿಕೆ ೨೮: ಮಂಗಳ
  29. ಸಂಚಿಕೆ ೨೯: ಭಾರತದ ಸಂವಿಧಾನ
  30. ಸಂಚಿಕೆ ೩೦: ಜಾರ್ಜ್ ವಾಷಿಂಗ್ಟನ್
  31. ಸಂಚಿಕೆ ೩೧: ಚಂದ್ರ
  32. ಸಂಚಿಕೆ ೩೨: ಚೆರ್ನೊಬಿಲ್ ದುರಂತ
  33. ಸಂಚಿಕೆ ೩೩: ಹತ್ತಿ
  34. ಸಂಚಿಕೆ ೩೪: ಪುಣೆ
  35. ಸಂಚಿಕೆ ೩೫: ಆನೆ
  36. ಸಂಚಿಕೆ ೩೬: ಅಮೆಜಾನ್
  37. ಸಂಚಿಕೆ ೩೭: ವಜ್ರ
  38. ಸಂಚಿಕೆ ೩೮: ಗಂಗೂಬಾಯಿ ಹಾನಗಲ್
  39. ಸಂಚಿಕೆ ೩೯: ಅರೋರ
  40. ಸಂಚಿಕೆ ೪೦: ಹೊಯ್ಸಳ
  41. ಸಂಚಿಕೆ ೪೧: ಇರುವೆ
  42. ಸಂಚಿಕೆ ೪೨: ಹಾಲು
  43. ಸಂಚಿಕೆ ೪೩: ಜೆ. ಆರ್. ಡಿ. ಟಾಟಾ
  44. ಸಂಚಿಕೆ ೪೪: ಜ್ವಾಲಾಮುಖಿ
  45. ಸಂಚಿಕೆ ೪೫: ಜಿಪಿಎಸ್
  46. ಸಂಚಿಕೆ ೪೬: ಭಾರತದ ಸ್ವಾತಂತ್ರ್ಯ ಸಂಗ್ರಾಮ
  47. ಸಂಚಿಕೆ ೪೭: ಮೂರನೆಯ ಪಾಣಿಪತ್ ಯುದ್ಧ
  48. ಸಂಚಿಕೆ ೪೮: ಮಂಗಳೂರು
  49. ಸಂಚಿಕೆ ೪೯: ಪಶ್ಚಿಮ ಘಟ್ಟಗಳು
  50. ಸಂಚಿಕೆ ೫೦: ಜಾಹೀರಾತು
  51. ಸಂಚಿಕೆ ೫೧: ಚಾರ್ಲ್ಸ್ ಡಾರ್ವಿನ್
  52. ಸಂಚಿಕೆ ೫೨: ಹುಲಿ
  53. ಸಂಚಿಕೆ ೫೩: ಹಿಮನದಿ
  54. ಸಂಚಿಕೆ ೫೪: ರಷ್ಯಾ
  55. ಸಂಚಿಕೆ ೫೫: ಟೇಬಲ್ ಟೆನ್ನಿಸ್
  56. ಸಂಚಿಕೆ ೫೬: ವಿಠ್ಠಲ
  57. ಸಂಚಿಕೆ ೫೭: ಸುನಾಮಿ
  58. ಸಂಚಿಕೆ ೫೮: ಶೀಲೀಂಧ್ರ
  59. ಸಂಚಿಕೆ ೫೯: ಅಂಚೆ ವ್ಯವಸ್ಥೆ
  60. ಸಂಚಿಕೆ ೬೦: ಚಿಪ್ಪು ಆಮೆ
  61. ಸಂಚಿಕೆ ೬೧: ಕಥಕ್
  62. ಸಂಚಿಕೆ ೬೨: ಕಥಕ್
  63. ಸಂಚಿಕೆ ೬೩: ಕಥಕ್
  64. ಸಂಚಿಕೆ ೬೪: ಕಥಕ್ಕಳಿ
  65. ಸಂಚಿಕೆ ೬೫: ಯಕ್ಷಗಾನ
  66. ಸಂಚಿಕೆ ೬೬: ಕನ್ನಡ ಅಕ್ಷರಮಾಲೆ
  67. ಸಂಚಿಕೆ ೬೭: ತುಳು ಭಾಷೆ
  68. ಸಂಚಿಕೆ ೬೮: ಕರ್ನಾಟಕ ರಾಜ್ಯೋತ್ಸವ
ಸಂಚಿಕೆ ೧
ಕೂಡ್ಲಿ
ಕೂಡ್ಲಿ
ಕೂಡ್ಲಿ ಶಿವಮೊಗ್ಗ ಜಿಲ್ಲೆಯ, ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.

ತುಂಗಾ ಮತ್ತು ಭದ್ರಾ - ಇವೆರಡು ಜೀವನದಿಗಳು ಸಂಗಮವಾಗುವಲ್ಲಿರುವ ಈ ಊರು ತುಂಗಭದ್ರಾ ನದಿಗೆ ಜನ್ಮ ನಿಡುವ ಸ್ಥಳ.

  • ಪ್ರಾಮುಖ್ಯತೆ

ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ 'ರಂಗನಾಥ ಸ್ವಾಮಿ' ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ನಂದಿಯ ಗುಡಿ ಇರುವುದುಂಟು. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಪ್ರತಿಪಾದಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕಷಣೆಗಳಲ್ಲೊಂದು.

  • ಇತಿಹಾಸ

ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು.

  • ಭೂಗೋಳ

ಶಿವಮೊಗ್ಗದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಈ ಊರಿಗೆ ಸುಲಭ ಬಸ್ಸು ಸೌಕರ್ಯವಿರುವುದುಂಟು. ಪ್ರಕೃತಿಯ ಮಡಿಲಾದ ಮಲೆನಾಡಿನ ಗಡಿಯಿದು - ಕೂಡ್ಲಿ.

ಸಂಚಿಕೆ ೨
ಲೋಟಸ್ ಅರಮನೆ
ಲೋಟಸ್ ಅರಮನೆ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.

ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ ಹಂಪೆವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧುಅಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.

ಈಗ ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ.

ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.

ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

  • ಚರಿತ್ರೆ

ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂಡಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ.

ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ಸಂಚಿಕೆ ೩
ಲಾಲ್ ಬಹಾದುರ್ ಶಾಸ್ತ್ರಿ
ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದವರು.

  • ಜೀವನ

ಲಾಲ್ ಬಹಾದುರ್ ಮೊಘಲ್‌ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

  • ಭಾರತ ಸರಕಾರದಲ್ಲಿ ಸಲ್ಲಿಸಿದ ಸೇವೆ

ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು. ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು, ಮೊದಲು ಸಾರಿಗೆ ಮಂತ್ರಿಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿ.

  • ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು

ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು. ಸ್ವಲ್ಪಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಹಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.

ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು, ಅದೇ ಟಾಶ್ಕೆಂಟ್ ಡಿಕ್ಲೆರೇಶನ್. ಆದರೆ, ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರದಾನ ಮಂತ್ರಿ ಹಾಗು ಈ ತರಹದ ಅಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ಸಂಚಿಕೆ ೪

ಬೃಂದಾವನ ಉದ್ಯಾನ

ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಮೈಸೂರಿನ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಾಯ ಈ ಅಣೆಕಟ್ಟನ್ನು ಕಟ್ಟಿಸಿದ ಇಂಜಿನಿಯರರಲ್ಲಿ ಪ್ರಮುಖರು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು.

ಸಂಚಿಕೆ ೫

ಕ್ರಿಸ್ಮಸ್ ವೃಕ್ಷ

ಕ್ರಿಸ್ಮಸ್ ಕ್ರೈಸ್ತ ಕ್ಯಾಲೆಂಡರ್‌ನ ಒಂದು ಸಾಂಪ್ರದಾಯಿಕ ರಜಾ ದಿನ. ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನದಂದು ಯೇಸು ಕ್ರಿಸ್ತ‌ನ ಹುಟ್ಟುಹಬ್ಬವಾಗಿ ಇದನ್ನು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಹಿ೦ದಿನ ದಿನವನ್ನು ಕ್ರಿಸ್ಮಸ್ ಈವ್ ಎ೦ಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನ ಆಚರಣೆಯಲ್ಲಿ ಮುಖ್ಯವಾಗಿ ಕ್ರಿಸ್ಮಸ್ ವೃಕ್ಷವನ್ನು ಮನೆಯಲ್ಲಿಡುವುದು, ಮಿಸಲ್‍ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು, ಉಡುಗೊರೆಗಳನ್ನು ಕೊಡುವುದು ಮೊದಲಾದವನ್ನು ಕಾಣಬಹುದು.

ಸಂಚಿಕೆ ೬

ಕ್ರಿಸ್ಮಸ್ ವೃಕ್ಷ

ಶ್ರೀನಿವಾಸ ರಾಮಾನುಜನ್ (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ಭಾರತದ ಪ್ರಸಿದ್ಧ ಗಣಿತಜ್ಞರು. ಸಣ್ಣ ವಯಸ್ಸಿನಿ೦ದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾ೦ಪ್ರದಾಯಿಕ ಶಿಕ್ಷಣ ಪಡೆಯದೆ ಸ್ವ-ಶಿಕ್ಷಿತ ಗಣಿತಜ್ಞರೂ ಹೌದು. ಮುಖ್ಯವಾಗಿ ಸ೦ಖ್ಯಾಶಾಸ್ತ್ರದಲ್ಲಿ ಸ೦ಶೋಧನೆ ನಡೆಸಿದ ರಾಮಾನುಜನ್ ಅನೇಕ ಸ೦ಕಲನ ಸೂತ್ರಗಳನ್ನು ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು.

ಸಂಚಿಕೆ ೭

ಖಜುರಾಹೊ ಶಿಲ್ಪಕಲೆ

ಖಜುರಾಹೊ ಭಾರತದ ಮಧ್ಯ ಪ್ರದೇಶದಲ್ಲಿರುವ ಒ೦ದು ನಗರ, ದೆಹಲಿಯಿ೦ದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯ೦ತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒ೦ದಾದ ಖಜುರಾಹೊ, ಮಧ್ಯಕಾಲೀನ ಹಿ೦ದೂ ದೇವಾಲಯಗಳ ಅತಿ ದೊಡ್ಡ ಗು೦ಪು. ಇದು ಇಲ್ಲಿನ ಶೃ೦ಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿ೦ದ ಈ ಸ್ಥಳಕ್ಕೆ "ಖಜುರಾಹೊ" ಎ೦ಬ ಹೆಸರು ಬ೦ದಿತೆ೦ದು ಹೇಳಲಾಗುತ್ತದೆ. ಮೊದಲಿಗೆ ಎ೦ಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ. ಖಜುರಾಹೊದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋದಿ೦ದ "ಪ್ರಪ೦ಚ ಸ೦ಸ್ಕೃತಿ ಕ್ಷೇತ್ರ" ಎ೦ದು ಮಾನ್ಯತೆ ಪಡೆದಿದೆ.

ಸಂಚಿಕೆ ೮

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒ೦ದು. ಇದು ಹಿ೦ದೂ ಧರ್ಮದ ಒ೦ದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒ೦ದೆ೦ದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಸ೦ಪೂರ್ಣ ಮಹಾಭಾರತ ಒ೦ದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊ೦ಡಿದ್ದು ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒ೦ದು ಭಾಗದಷ್ಟು ಮಾತ್ರ ಆಗುತ್ತದೆ.

ಸಂಚಿಕೆ ೯

ಮೈಸೂರು ' ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ'. ಮೈಸೂರು ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನ ಮೈಸೂರು ಸಂಸ್ಥಾನದ ರಾಜಧಾನಿ. ಇಲ್ಲಿ ಹಲವು ಸುಂದರ ಅರಮನೆಗಳಿರುವುದರಿಂದ ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯುತ್ತಾರೆ. ಭಾರತದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಇದೇ ನಗರದಲ್ಲಿದೆ. ಇತರ ಹೆಸರುವಾಸಿ ಸಂಶೋಧನಾ ಸಂಸ್ಥೆಗಳಾದ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)ಗಳಿಗೂ ಮೈಸೂರು ಮನೆಯಾಗಿದೆ. ಕುವೆಂಪು, ಮೋಕ್ಷಗುಂಡಂ ವಿಶ್ವೇಶ್ವರಾಯ, ಬಿ ಎಂ ಶ್ರೀ, ಆರ್ ಕೆ ನಾರಾಯಣ್ ಮುಂತಾದ ಹಲವು ಪ್ರಮುಖರಿಗೆ ಮನೆಯಾಗಿದ್ದ ಈ ಊರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ರಾಜ ಮಹಾರಾಜರ ಸಂಸ್ಕೃತಿಯ ಸೊಗಡನ್ನು ಉಳಿಸಿಕೊಂಡಿರುವ ನಗರಗಳಲ್ಲಿ ಇದು ಮುಂಚೂಣಿಯಲ್ಲಿದೆ.

ಪ್ರವಾಸಿ ತಾಣಗಳು

ಅರಮನೆ: ಅರಮನೆಯ ನಿಜವಾದ ವೈಭೋಗವನ್ನು ಇಲ್ಲಿ ಕಾಣಬಹುದಾಗಿದೆ. ಅರಮನೆಯ ಕೆಲವು ಭಾಗಗಳಿಗೆ ಮಾತ್ರ ಸಾರ್ವಜನಿಕ ಪ್ರವೇಶವಿರುತ್ತದೆ.

ಮೃಗಾಲಯ: ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರಿನ ಮೃಗಾಲಯ ಅತ್ಯಂತ ವಿಶಾಲವಾಗಿದ್ಧು ಹಲವಾರು ಜಾತಿಯ ಪ್ರಾಣಿ ಪ್ರಭೇಧಗಳನ್ನು ಇಲ್ಲಿ ಕಾಣಬಹುದಾಗಿದೆ. ಅಳಿವಿನ ಅಂಚಿನಲ್ಲಿರುವ ಹಲವಾರು ಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ಇಲ್ಲಿ ಕಾಣಬಹುದು.

ಕೃಷ್ಣರಾಜ ಅಣೆಕಟ್ಟು : ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು ವಿಶ್ವೇಶ್ವರಯ್ಯನವರ ಕಾಲದಲ್ಲಿ ಕಟ್ಟಲ್ಪಟ್ಟಿರುತ್ತದೆ. ಇದಕ್ಕೆ ಹೊಂದಿಕೊಂಡಿರುವ ಉದ್ಯಾನವನ ಹಾಗೂ ಅದರಲ್ಲಿರುವ ಸಂಗೀತದ ಕಾರಂಜಿ ಎಲ್ಲರನ್ನೂ ಆಕರ್ಷಿಸುತ್ತದೆ.

ಚಾಮುಂಡಿ ಬೆಟ್ಟ: ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡಿ ದೇವಿಯ ದೇವಸ್ಠಾನ ಪುರಾತನವಾದುದಾಗಿದ್ದು, ಮಹಾರಾಜರ ಮನೆದೇವರಾಗಿರುತ್ತದೆ.

ಇದಲ್ಲದೆ ಸಮೀಪದಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ, ನಿಮಿಷಾಂಬ ದೇವಸ್ಥಾನ ಇವುಗಳು ನೋಡಲೇಬೇಕಾದ ಪ್ರವಾಸಿ ತಾಣಗಳಾಗಿರುತ್ತವೆ.

ಸಂಚಿಕೆ ೧೦

ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ. ೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವ೦ಶದ ಚಕ್ರವರ್ತಿಗಳಿ೦ದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊ೦ಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊ೦ಡಿತ್ತು. ಕ್ರಿ.ಪೂ. ೩೨೬ ರಲ್ಲಿ 'ಗ್ರೀಸ್'ನ ಅಲೆಕ್ಸಾ೦ಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನ೦ತರ ಸಾಮ೦ತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು). ಬೇಗನೆಯೇ ಅಲೆಕ್ಸಾ೦ಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨೩ ರಲ್ಲಿ ನಿಧನನಾದ ನ೦ತರ ಆತನ ಸಾಮ್ರಾಜ್ಯ ಹ೦ಚಿಹೋಗಲಾರ೦ಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊ೦ಡದ್ದು ಚ೦ದ್ರಗುಪ್ತ ಮೌರ್ಯ. ಚ೦ದ್ರಗುಪ್ತ ಮೌರ್ಯ ಚಾಣಕ್ಯನ ಸಹಾಯದಿಂದ ರಾಜ್ಯವನ್ನು ನಿರ್ಮಿಸಿದ. ಚ೦ದ್ರಗುಪ್ತ ಮೌರ್ಯನ ನಂತರ ಅವನ ವಂಶದ ಬಿ೦ದುಸಾರ, ಅಶೋಕ ಮೌರ್ಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದರು.

ಸಂಚಿಕೆ ೧೧

ತಾಜ್ ಮಹಲ್ ಭಾರತದ ಆಗ್ರಾ ನಗರದಲ್ಲಿ ಇರುವ ಸ್ಮಾರಕ. ಇದನ್ನು ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಷಹ ಜಹಾನ್ ತನ್ನ ರಾಣಿ ಅರ್ಜುಮನ್ ಬಾನು ಬೇಗಮ್ (ನ೦ತರ ಮಮ್ತಾಜ್ ಮಹಲ್) ಳ ಗೋರಿಯಾಗಿ ಮತ್ತು ಆಕೆಯ ಸ್ಮರಣಾರ್ಥ ಕಟ್ಟಿಸಿದ್ದು. ಸ್ಮಾರಕವನ್ನು ಕಟ್ಟಲು ೨೩ ವರ್ಷಗಳು ಬೇಕಾದವು (೧೬೩೦-೧೬೫೩).

"ತಾಜ್ ಮಹಲ್" ಎ೦ಬ ಹೆಸರಿನ ವ್ಯುತ್ಪತ್ತಿ ಏನೆ೦ದು ಸರಿಯಾಗಿ ತಿಳಿದುಬ೦ದಿಲ್ಲ. ಷಹ ಜಹಾನನ ಆಸ್ಥಾನದ ಕಡತಗಳಲ್ಲಿ ಇದರ ಪ್ರಸ್ತಾಪ "ಮಮ್ತಾಜ್ ಮಹಲಳ ರೌಜಾ" (ರೌಜಾ ಎ೦ದರೆ ಗೋರಿ) ಎ೦ದಷ್ಟೆ ಇದೆ. "ತಾಜ್" ಎ೦ಬುದು ರಾಣಿಯ ಹೆಸರಾದ ಮಮ್ತಾಜ್ ಎ೦ಬುದರ ಚುಟುಕುರೂಪ ಇದ್ದೀತು. ಜನಪ್ರಿಯ ವಾಡಿಕೆಯಲ್ಲಿ ಕೆಲವರು ಇದನ್ನು ಕರೆಯುವುದು "ವಾಹ್! ತಾಜ್!" ಎ೦ದು.

ತಾಜಾ, ಎಂದೆಂದಿಗೂ ಹೊಚ್ಚ ಹೊಸತಾಗಿಯೇ ಇರುವ, ಮಹಲು, ಕಟ್ಟಡ, ಆದ್ದರಿಂದ ಎಂದೆಂದಿಗೂ ಹೊಚ್ಚಹೊಸತಾಗಿಯೇ ಇರುವ ಸುಂದರ ಕಟ್ಟಡ ಎಂದು ಕವಿ ದ ರಾ ಬೇಂದ್ರೆಯವರು ಬಣ್ಣಿಸುತ್ತಾರೆ.

"ತಾಜ್ ಮಹಲ್" ಹಿ೦ದೊಮ್ಮೆ "ತೇಜೋ ಮಹಾಲಯ" ಎ೦ಬ ಹಿ೦ದೂ ದೇವಸ್ಥಾನವಾಗಿತ್ತು ಎ೦ದು ಪ್ರತಿಪಾದಿಸಿದವರೂ ಇದ್ದಾರೆ.[[೧]]

೧೯೮೩ ರಲ್ಲಿ ತಾಜ್ ಮಹಲ್ ಅನ್ನು ಯುನೆಸ್ಕೋ ಪ್ರಪ೦ಚ ಸ೦ಸ್ಕೃತಿ ಕ್ಷೇತ್ರ ಎ೦ದು ಘೋಷಿಸಿದೆ.

ಸಂಚಿಕೆ ೧೨

"ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ" ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ ಪಿ ರಾಜರತ್ನಂ ಅವರು.
ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ಕನ್ನಡ ಪಂಡಿತ ಹುದ್ದೆ ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ೧೯೭೬ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ. ಪಿ. ರಾಜರತ್ನಂ ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
``ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. ಕುಡುಕನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. ಟಿ ಪಿ ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.

ಸಂಚಿಕೆ ೧೪

ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ) ಹಾಗೂ ಈ ಜಿಲ್ಲೆಗಳಿಗೆ ಅಂಟಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಬಯಲಾಟಗಳಲ್ಲಿ "ತೆಂಕುತಿಟ್ಟು" ಮತ್ತು "ಬಡಗುತಿಟ್ಟು ಎಂಬ ಎರಡು ಪ್ರಮುಖ ಪ್ರಭೇದಗಳನ್ನು ಕಾಣಬಹುದು. ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಡಗುತಿಟ್ಟು ಶೈಲಿಯ ಬಯಲಾಟಗಳು ಕಂಡುಬಂದರೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕು ತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಲ್ಲಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ಎರಡೂ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

ಸಂಚಿಕೆ ೧೫

ಚದುರಂಗ (ಚೆಸ್) ಇಬ್ಬರು ಆಟಗಾರರಿಂದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು ರಾಜ, ಒಂದು ಮಂತ್ರಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ ವಿಶಿಷ್ಟ ರೀತಿಯಲ್ಲಿ ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ.

ಸಂಚಿಕೆ ೧೬

ಮೋಹನ್ ದಾಸ್ ಕರಮ್‍ಚ೦ದ್ ಗಾ೦ಧಿ (ಅಕ್ಟೋಬರ್ ೨, ೧೮೬೯ - ಜನವರಿ ೩೦, ೧೯೪೮), ಜನಪ್ರಿಯವಾಗಿ ಮಹಾತ್ಮ ಗಾ೦ಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತ೦ತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು.

ಬ್ರಿಟಿಷ್ ಆಡಳಿತದಿ೦ದ ಭಾರತ ಸ್ವಾತ೦ತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತ೦ತ್ರ್ಯ ಚಳುವಳಿಗೆ ಸ್ಫೂರ್ತಿ ತ೦ದರು. ಮಾರ್ಟಿನ್ ಲೂಥರ್ ಕಿ೦ಗ್, ನೆಲ್ಸನ್ ಮ೦ಡೇಲಾ ಮೊದಲಾದ ಅಹಿ೦ಸಾವಾದಿ ಹೋರಾಟಗಾರರು ಗಾ೦ಧೀಜಿಯವರ ಸತ್ಯಾಗ್ರಹದ ತತ್ವದಿ೦ದ ಆಳವಾಗಿ ಪ್ರಭಾವಿತರಾದವರು. ಗಾ೦ಧೀಜಿಯವರ ಹೇಳಿಕೆಯ೦ತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನ೦ಬಿಕೆಗಳಿ೦ದ ಬ೦ದ೦ಥವು: ಸತ್ಯ ಮತ್ತು ಅಹಿ೦ಸೆ.

ಮಹಾತ್ಮರ ಜನ್ಮದಿನವಾದ ಅಕ್ಟೋಬರ್ ೨ರಂದು ಪ್ರತಿ ವರ್ಷ ಭಾರತ ದೇಶಾದ್ಯಂತ 'ಗಾಂಧಿ ಜಯಂತಿ' ಆಚರಿಸಲಾಗುತ್ತದೆ.

ಸಂಚಿಕೆ ೧೭

೨೦ನೆ ಶತಮಾನದಲ್ಲಿ ಮೈಸೂರು ಸಂಸ್ಥಾನ, ಮುಂಬೈ ಆಧಿಪತ್ಯ , ಹೈದರಾಬಾದ್ ನಿಜಾಮ ಸಂಸ್ಥಾನ ಮತ್ತು ಮದ್ರಾಸ್ ಆಧಿಪತ್ಯಗಳ ನಡುವೆ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಗರ ನಾಡು ೫೦ ವರ್ಷಗಳ ಹಿಂದೆ ನವೆಂಬರ್ ೧ ೧೯೫೬ರಲ್ಲಿ ಏಕೀಕರಣಗೊಂಡು ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ತದನಂತರ ೧೯೭೩ ನವೆಂಬರ್ ೧ ರೊಂದು ಕರ್ನಾಟಕ ಎಂದು ನಾಮಕರಣಗೊಂಡಿತು. ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವನ್ನು ವಿಶ್ವಾದ್ಯಂತ ಕನ್ನಡಿಗರು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಕವಿ ಕುವೆಂಪು ನಾಡ ಗೀತೆಯಲ್ಲಿ ಸ್ತುತಿಸಿದಂತೆ ರಸ ಋಷಿಗಳ ಈ ಬೀಡಿನ ಜನರು ಕಳೆದ ೫೦ ವರ್ಷಗಳಲ್ಲಿ ಸಾಹಿತ್ಯ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಿ ಕನ್ನಡ ನಾಡಿಗೆ ಮತ್ತು ಅದರ ಜನನಿಯಾದ ಭಾರತಕ್ಕೆ ಅಪಾರ ಗೌರವ ತಂದಿದ್ದಾರೆ.

ಸಂಚಿಕೆ ೧೮

ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್ ಜಗತ್ತಿನ ಶ್ರೇಷ್ಟ ಸಂಗೀತಗಾರರ ಸಾಲಿನಲ್ಲಿ ಅಗ್ರಮಾನ್ಯರು. ತಮ್ಮ ೮ನೆ ವಯಸ್ಸಿನಲ್ಲಿಯೆ ಸಿಂಫೊನಿ ರಚಿಸಿ ಅಸಾಮಾನ್ಯ ಸಂಗೀತ ಪ್ರತಿಭೆಯನ್ನು ತೋರಿದ ಮೊಟ್ಜಾರ್ಟ್, ತಮ್ಮ ೩೫ ವರ್ಷದ ಅಲ್ಪಾಯುಷ್ಯದಲ್ಲಿ ೪೧ ಸಿಂಫೊನಿ, ೨೭ ಪಿಯಾನೋ ಕಾನ್ಸರ್ಟೋಗಳು, ೧೬ ಆಪೇರಾ, ೧೯ ಪಿಯಾನೋ ಸೊನಾಟಗಳು ಮತ್ತು ೨೩ ತಂತಿ ಕ್ವಾರ್ಟೆಟ್(ನಾಲ್ಕು ವಾದ್ಯಗಳ ವೃಂದ ಸಂಗೀತ)ಸೇರಿದಂತೆ ೬೦೦ಕ್ಕೂ ಮೇಲ್ಪಟ್ಟ ಸಂಗೀತ ಕೃತಿಗಳ ಬೃಹತ್ ಭಂಡಾರ ಸೃಷ್ಟಿಸಿದರು. ಇಂದಿಗೂ ಕೆಲವು ಮೊಟ್ಜಾರ್ಟ್ ಕೃತಿಗಳನ್ನು ನುಡಿಸಲು ಅಪಾರ ಪಾಂಡಿತ್ಯ, ಪ್ರೌಢಿಮೆ ಮತ್ತು ಪರಿಣಿತಿ ಬೇಕು. ಇಂದಿನ ಆಸ್ಟ್ರಿಯಾದಲ್ಲಿರುವ ಸಾಲ್ಜ್‌ಬರ್ಗ್ ಎಂಬ ಊರಿನಲ್ಲಿ ಜನವರಿ ೨೭,೧೭೫೬ ರೊಂದು ಜನಿಸಿದ ಮೊಟ್ಜಾರ್ಟ್‌ರ ಜನ್ಮದ ೨೫೦ನೆ ವಾರ್ಷಿಕೋತ್ಸವ ಈ ವರ್ಷ ವಿಶ್ವಾದ್ಯಂತ ಸಂಗೀತ ಪ್ರೇಮಿಗಳು ಆಚರಿಸುತ್ತಿದ್ದಾರೆ.

ಸಂಚಿಕೆ ೧೯
ಅ.ನ.ಕೃಷ್ಣರಾಯ
ಅ.ನ.ಕೃಷ್ಣರಾಯ

ಅನಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯರು) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ನೂರಾ ಹತ್ತು ಕಾದಂಬರಿಗೆಳನ್ನು ಬರೆದಿರುವ ಅನಕೃ ಕಾದಂಬರಿ ಸಾರ್ವಭೌಮರೆಂದು ಪ್ರಖ್ಯಾತರಾಗಿದ್ದರು. ಪ್ರಗತಿಶೀಲ ಸಾಹಿತ್ಯ ಚಳುವಳಿಯ ಪ್ರಮುಖರೆಂದು ಕರೆಸಿಕೊಂಡವರು. ಅವರ ಸಂಧ್ಯಾರಾಗ, ಉದಯರಾಗ, ನಟಸಾರ್ವಭೌಮ, ಮಂಗಳಸೂತ್ರ ಮುಂತಾದ ಕಾದಂಬರಿಗಳು ಜನಪ್ರಿಯವಾಗಿವೆ. ಶ್ರೀಸಾಮಾನ್ಯನಿಗೂ ಅರ್ಥವಾಗುವಂತಹ ಸರಳವಾದ ಭಾಷೆ ಉಪಯೋಗಿಸಿ ಬರೆಯುತ್ತಿದ್ದವರಲ್ಲೊಬ್ಬರು. ಅನಕೃ ಪ್ರಸಿದ್ಧ ವಾಗ್ಮಿ, ಕೂಡ. ನೇರ,ನಿಷ್ಟುರ ವ್ಯಕ್ತಿತ್ವ ಅನಕೃ ಅವರದ್ದೆಂದು ಹೇಳಲಾಗುತ್ತದೆ.

ಅನಕೃ ಮಾಡಿದ ಅತಿ ಮಹತ್ತರ ಕಾರ್ಯವೆಂದರೆ ಕನ್ನಡ ಚಳುವಳಿಗಳನ್ನು ಹುಟ್ಟು ಹಾಕಿದ್ದು. ಕನ್ನಡಿಗರ ಸ್ವಾಭಿಮಾನವನ್ನು ತಮ್ಮ ಸಿಡಿಲನುಡಿಗಳಂತಹ ಭಾಷಣಗಳ ಮೂಲಕ ಬಡಿದೆಬ್ಬಿಸಿದರು. ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದ್ದ ಪರಿಸ್ಥಿತಿಯಲ್ಲಿ ಕನ್ನಡದ ಪಾಂಚಜನ್ಯ ಮೊಳಗಿಸಿದರು ಅನಕೃ. "ಕನ್ನಡ ನಮ್ಮ ಭಾಷೆ. ಅದನ್ನು ಮರೆತು ಬಾಳುವುದು ಮೂರ್ಖತನ, ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಧಾನ ಪೂಜೆ ಸಲ್ಲಬೇಕು, ಕನ್ನಡ ಚಲನಚಿತ್ರಗಳು ಪ್ರದರ್ಶನಗೊಳ್ಳಬೇಕು, ಕನ್ನಡ ಆಡಳಿತ ಭಾಷೆಯಾಗಬೇಕು" ಎಂದು ಹೋರಾಟ ಮಾಡಿ ಮಾಸ್ತಿಯವರಿಂದ "ಅಚ್ಚ ಕನ್ನಡಿಗ" ಎಂಬ ಪ್ರಶಂಸೆ ಪಡೆದುಕೊಂಡವರು ಅನಕೃ.

ಸಂಚಿಕೆ ೨೦
ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‍ಕುಮಾರ್
ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‍ಕುಮಾರ್

ನಟಸಾರ್ವಭೌಮ ಡಾ. ರಾಜ್‍ಕುಮಾರ್ (ಜನನ: ೨೪ ಏಪ್ರಿಲ್ ೧೯೨೯ - ಮರಣ: ೧೨ ಏಪ್ರಿಲ್ ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು.

ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಡಾ.ರಾಜ್ ಅವರ ಕೊನೆಯ ಚಿತ್ರ ಶಬ್ದವೇದಿ. ಭಕ್ತಿಪ್ರಧಾನ ಚಿತ್ರಗಳಾದ ಭಕ್ತ ಕುಂಬಾರ, ಸಂತ ತುಕಾರಾಮ, ಭಕ್ತ ಚೇತ, ಐತಿಹಾಸಿಕ ಚಿತ್ರಗಳಾದ ಮಯೂರ, ಶ್ರೀಕೃಷ್ಣದೇವರಾಯ, ರಣಧೀರ ಕಂಠೀರವ, ಪೌರಾಣಿಕ ಚಿತ್ರಗಳಾದ, ಶ್ರೀಕೃಷ್ಣಗಾರುಡಿ, ಬಭ್ರುವಾಹನ ಹಾಗು ಸಾಮಾಜಿಕ ಚಿತ್ರಗಳಾದ ಹಾಲುಜೇನು, ಹೊಸಬೆಳಕು, ದೇವತಾ ಮನುಷ್ಯ, ಜೀವನಚೈತ್ರ, ಆಕಸ್ಮಿಕ ಇತ್ಯಾದಿ ಚಿತ್ರಗಳು ರಾಜ್ ಅಭಿನಯದ ಪ್ರಮುಖ ಚಿತ್ರಗಳು.

ಜೀವನಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರಪ್ರಶಸ್ಸ್ತಿಯನ್ನು ಪಡೆದರು. ೧೯೮೧ರಲ್ಲಿ ನಡೆದ ಗೋಕಾಕ್ ಚಳುವಳಿಯ ನೇತೃತ್ವ ವಹಿಸಿದ್ದ ಡಾ.ರಾಜ್, ಕನ್ನಡ ಚಿತ್ರಗಳಷ್ಟೆ ಹೊರತು ಬೇರಾವುದೇ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲಿಲ್ಲ.

೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‍ನಿಂದ ಅಪಹರಣವಾಗಿದ್ದ ರಾಜ್‍ಕುಮಾರ್ ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ಸಂಚಿಕೆ ೨೧
ಸರ್ದಾರ್ ವಲ್ಲಭಭಾಯ್ ಪಟೇಲ್
ಸರ್ದಾರ್ ವಲ್ಲಭಭಾಯ್ ಪಟೇಲ್

ಸರ್ದಾರ್ ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦) ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ - ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದವರು. ಇವರು ಗಾಂಧೀಜಿಯವರ ಕೆಳಗೆ ಭಾರತದ ರಾಷ್ಟೀಯ ಕಾಂಗ್ರೆಸ್‌ನ ಮುಖ್ಯ ನಿರ್ವಾಹಕರಾಗಿದ್ದರು. ಇವರ ಪ್ರಯತ್ನಗಳಿಂದ ೧೯೩೭ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಜಯವನ್ನು ಸಾಧಿಸಿತು. ಮೂಲತಃ ಸರ್ದಾರ್ ಪಟೇಲ್‌ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದರಾದರೂ, ಗಾಂಧೀಜಿಯವರ ಒತ್ತಾಯದ ಮೇಲೆ ಪಟೇಲರು ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು. ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಇವರು ವಹಿಸಿದ ಪ್ರಮುಖ ಪಾತ್ರ ಇತಿಹಾಸದ ಪುಟಗಳಲ್ಲಿ ಅಮರವಾಗಿದೆ. ಸರ್ದಾರ್ ಪಟೇಲರಿಗೆ ೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಂಚಿಕೆ ೨೨

ಅನಿಲ್ ರಾಧಾಕೃಷ್ಣ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) - ಭಾರತದ ಕ್ರಿಕೆಟ್ ಆಟಗಾರ ಮತ್ತು ಭಾರತ ಕ್ರಿಕೆಟ್ ತಂಡದ ಸದಸ್ಯ ೧೯೯೦ರಿಂದ.

ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಏಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಪಾಕಿಸ್ತಾನದ ವಿರುದ್ಧ ೧೯೯೯ರಲ್ಲಿ ನಡೆದ ಪಂದ್ಯದಲ್ಲಿನ ಎರಡನೇ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದು ಅನಿಲ್ ಕುಂಬ್ಳೆ ಒಬ್ಬರಾಗಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಸಂಚಿಕೆ ೨೩
ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಜನರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ.

ಅಂದು ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯನ್‍ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬಿ ನಾಗರೀಕರು, ಸಮಾವೇಶಗೊಂಡಿದ್ದರು.

ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್, ಉದ್ಯಾನದೊಳಗೆ ಕಾಲಿಡುತ್ತಲೇ, ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತ. ಗುಂಡಿನ ದಾಳಿಯು ಸಂಜೆ ೧೭:೧೫ಕ್ಕೆ ಪ್ರಾರಂಭವಾದದ್ದು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ, ಸತತವಾಗಿ ನಡೆಯಿತು. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು, ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು.

ಮಾರ್ಚ್ ೧೩ ೧೯೪೦ರಂದು ಸಿಖ್ಖರ ಕ್ರಾಂತಿಕಾರಿ ಎಂದು ಹೇಳಲಾಗುವ, ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗು ಸ್ವತಃ ಗಾಯಗೊಂಡ ಉಧಮ್ ಸಿಂಗ್ ಲಂಡನ್ನಿನ ಕ್ಯಾಕ್‍ಸ್ಟನ್ ಹಾಲ್ ನಲ್ಲಿ ರೆಜಿನಾಲ್ಡ್ ಡೈಯರ್ಅನ್ನು ಹತ್ಯೆಗೈದರು.

ಸಂಚಿಕೆ ೨೪

ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.

ಮೆಣಸು ಕಾಳುಗಳನ್ನು ಅದರ ಮೂಲವನ್ನವಲಂಬಿಸಿ ವರ್ಗೀಕರಿಸಲಾಗುತ್ತದೆ. ಎರಡು ಬಹಳ ಜನಪ್ರಿಯ ತಳಿಗಳು ಭಾರತದ ಮಲಬಾರ್ ತೀರದಲ್ಲಿ ದೊರೆಯುವ ತಳಿಗಳು: ಮಲಬಾರ್ ಮೆಣಸು ಹಾಗೂ ತೆಲ್ಲಿಚೆರಿ ಮೆಣಸು. ತೆಲ್ಲಿಚೆರಿ ತಳಿ ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯೆಂದು ಹೇಳಲಾಗುತ್ತದೆ. ಸರವಾಕ ಎಂಬ ತಳಿಯ ಮೆಣಸು ಮಲೇಶಿಯದ ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋಂಗ್ ಎಂಬ ತಳಿ ಇಂಡೋನೇಶಿಯದ ಸುಮಾತ್ರ ದ್ವೀಪದಲ್ಲಿ ದೊರಕುತ್ತವೆ. ಬಿಳಿಯ ಮುಂಟೋಕ್ ಮೆಣಸು ಇಂಡೋನೇಶಿಯದ ಮತ್ತೊಂದು ಉತ್ಪಾದನೆ, ಬಾಂಗ್ಕಾ ದ್ವೀಪದಲ್ಲಿ ದೊರೆಯುವಂತದ್ದು.

ಸಂಚಿಕೆ ೨೫
ಸತ್ಯಾಗ್ರಹದ ನಡಿಗೆಯಲ್ಲಿ ಗಾಂಧೀಜಿ ಮತ್ತು ಇತರರು

ಉಪ್ಪಿನ ಸತ್ಯಾಗ್ರಹ ಭಾರತ ಇತಿಹಾಸದ ಒಂದು ಪ್ರಮುಖ ಘಟನೆಯಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು, ಉಪ್ಪಿನ ಸತ್ಯಾಗ್ರಹ ಅಥವ ದಂಡಿ ಯಾತ್ರೆ ಎಂದು. ಕರೆಯಲಾಗುತ್ತದೆ.

ಬ್ರಿಟೀಷ್ ಸರ್ಕಾರವು ಸಾಮಾನ್ಯ ಜನರು ಬಳಸುವ ಉಪ್ಪಿನ ಮೇಲೆ ಕರವನ್ನು ವಿಧಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸಿ ಕೊಳ್ಳುತ್ತಿತ್ತು. ಈ ಕರದಡಿಯಲ್ಲಿ ಬ್ರಿಟಿಷ್ ಸರ್ಕಾರದ ಹೊರತು ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ ಅಥವಾ ಮಾರುವಂತಿರಲಿಲ್ಲ. ಸಮುದ್ರ ತಟದಲ್ಲಿದ್ದ ನಾಗರಿಕರಿಗೆ ಸಮುದ್ರದ ಉಪ್ಪು ಪುಕ್ಕಟೆಯಲ್ಲಿ ಸುಲಭವಾಗಿ ದೊರೆಯುವಂತಿದ್ದರೂ ಅವರು ಅದನ್ನು ಸರ್ಕಾರದಿಂದ ಕೊಂಡುಕೊಳ್ಳಬೇಕಾಗಿತ್ತು.ಈ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮ ಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ಸಮುದ್ರ ತಟದಲ್ಲಿರುವ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ, ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಯಾತ್ರೆಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.

ಭಾರತದಾದ್ಯಂತ ಉಪ್ಪಿನ ಸತ್ಯಾಗ್ರಹವು ಸಹಸ್ರಾರು ಜನರನ್ನು ತನ್ನೆಡೆಗೆ ಸೆಳೆಯಿತು ಹಾಗು ತನ್ಮೂಲಕ ವಿಶ್ವದ ಗಮನವನ್ನು ಭಾರತದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹ ಚಳುವಳಿಯತ್ತ ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿ ಸತ್ಯಾಗ್ರಹವು ಒಂದು ಮಹತ್ವಪೂರ್ಣ ಘಟನೆಯಾಗಿತ್ತು.

ಸಂಚಿಕೆ ೨೬
ರಾಮಾಯಣದ ಒಂದು ದೃಶ್ಯ

ರಾಮಾಯಣ ಹಿಂದೂ ಧರ್ಮ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಎಂಬ ಋಷಿಯಿಂದ ರಚಿಸಲ್ಪಟ್ಟಿದೆ. "ರಾಮಾಯಣ" ಪದವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದ ರಚಿತವಾಗಿದ್ದು, ೭ ಕಾಂಡಗಳಾಗಿ ವಿಭಜಿತವಾಗಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರವನ್ನು ಕುರಿತಾಗಿದೆ.

ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ. ೫ನೇ ಶತಮಾನದಿಂದ ಕ್ರಿ.ಪೂ. ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯ ಕೃತಿಗಳಲ್ಲಿ ಒಂದಾದ ರಾಮಾಯಣವು, ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಪೂರ್ತಿಯಾಯಿತು. ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು (ಶ್ರೀ ರಾಮಾಯಣದರ್ಶನಂ) ಪ್ರಭಾವಗೊಂಡವರಲ್ಲಿ ಪ್ರಮುಖರು.

ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ೮ನೇ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ಆಗ್ನೇಯ ಏಷ್ಯಾದಲ್ಲಿ ಏರ್ಪಟ್ಟಾದಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಇವುಗಳ ಮೂಲಕ ರಾಮಾಯಣ ಇಂದಿನ ಇಂಡೊನೇಷ್ಯಾ, ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.

ಸಂಚಿಕೆ ೨೭

ಬ್ರೆಜಿಲ್ - ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ. ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಭಾಷೆ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.

ಸಂಚಿಕೆ ೨೮
ಹಬಲ್ ದೂರದರ್ಶಕ ಕಂಡಂತೆ ಮಂಗಳ

ಮಂಗಳ - ಸೂರ್ಯಸೌರಮಂಡಲದಲ್ಲಿನ ನಾಲ್ಕನೆಯ ಗ್ರಹ. ಸೂರ್ಯನಿಗೆ ಭೂಮಿಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ. ಮಂಗಳ ಗ್ರಹ ಸೌರಮಂಡಲದ ಎರಡನೆಯ ಅತಿ ಸಣ್ಣ ಗ್ರಹವಾಗಿದ್ದು ತೆಳುವಾದ ಗಾಳಿಗೋಳವನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ 'ಮಾರ್ಸ್' (Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೬೮೬.೯೮ ದಿನಗಳೇ ಬೇಕಾಗುತ್ತದೆ.

ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ, ಇದನ್ನು 'ಕೆಂಪು ಗ್ರಹ' ಅಥವಾ 'ಅಂಗಾರಕ' (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ.

ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಈ ಗ್ರಹದ ಅನ್ವೇಷಣೆಗೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಕಳುಹಿಸಲಾಗಿದೆ. ಮಂಗಳದ ಸಮೀಪದಲ್ಲಿ ಹಾದುಹೋದ ಮೊಟ್ಟಮೊದಲ ನೌಕೆ ೧೯೬೪ರಲ್ಲಿ ನಾಸಾ ಉಡಾಯಿಸಿದ ಮ್ಯಾರಿನರ್ ೪. ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು ಪರಿಭ್ರಮಿಸುತ್ತಿವೆ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತುಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ೫ ನವೆಂಬರ್ ೨೦೧೩ರಲ್ಲಿ ಹಾರಿಬಿಟ್ಟ ಮಂಗಳಯಾನ ಉಪಗ್ರಹ ೨೯೮ ದಿನಗಳು ಸಾಗಿದ ನಂತರ ೨೪ ಸೆಪ್ಟಂಬರ್ ೨೦೧೪ ರಂದು ಮಂಗಳನ ಕಕ್ಷೆಗೆ ಸೇರಿದ್ದು, ತನ್ನ ಕೆಲಸವನ್ನ ಆರಂಭಿಸಿದೆ.

ಸಂಚಿಕೆ ೨೯
ಭಾರತ ಸಂವಿಧಾನದ ಪೀಠಿಕೆ

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ೪೪೪ ವಿಧಿಗಳನ್ನೂ, ೧೦ (ನಂತರ ೧೨) ಅನುಚ್ಛೇದಗಳನ್ನೂ, ಅನೇಕ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನವು ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು.

ಸಂಚಿಕೆ ೩೦

ಜಾರ್ಜ್ ವಾಷಿಂಗ್ಟನ್ (ಫೆಬ್ರುವರಿ ೨೨, ೧೭೩೨ಡಿಸೆಂಬರ್ ೧೪, ೧೭೯೯) ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಬ್ರಿಟನ್ನಿನ ವಿರುದ್ಧ ವಿಜಯಿಯಾದ ಖಂಡದ ಸೈನ್ಯದ ಸೇನಾಧಿಪತಿಯಾಗಿದ್ದು, ಯುದ್ಧದ ಪರಿಣಾಮವಾಗಿ ಸ್ಥಾಪಿತವಾದ ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ರಾಷ್ಟ್ರಪತಿಯಾಗಿ ಚುನಾಯಿತರಾದವರು. ಅಮೇರಿಕ ದೇಶದ ಸ್ಥಾಪನೆಯಲ್ಲಿ ಇವರ ಪ್ರಮುಖ ಪಾತ್ರವಿದ್ದಿದ್ದರಿಂದ ಇವರನ್ನು ಅಮೇರಿಕದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ.

ವರ್ಜೀನಿಯ ರಾಜ್ಯದಲ್ಲಿ ಹುಟ್ಟಿದ ಇವರು ಫ್ರೆಂಚ್ ಮತ್ತು ಇಂಡಿಯನ್ ಯುದ್ಧದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಮೊದಲು ತಮ್ಮ ಶೌರ್ಯವನ್ನು ಪ್ರದರ್ಶಿಸಿದರು. ಈ ಅನುಭವ ಮುಂದಿನ ಕ್ರಾಂತಿಕಾರಿ ಯುದ್ಧದಲ್ಲಿ ಉಪಯುಕ್ತವಾಯಿತು. ಯುದ್ಧದ ನಂತರ ದೇಶದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರದ ಎರಡು ಅವಧಿಗಳಲ್ಲೂ ಅವಿರೋಧವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಇವರು ಎರಡು ಅವಧಿಗಳ ನಂತರ ಸ್ವತಃ ನಿವೃತ್ತರಾಗಿದ್ದರಿಂದ ಅಮೇರಿಕದ ರಾಷ್ಟ್ರಪತಿಗಳು ಗರಿಷ್ಟ ಎರಡು ಅವಧಿಗಳಷ್ಟು ಮಾತ್ರ ಅಧಿಕಾರ ವಹಿಸಬಹುದೆಂಬ ವಾಡಿಕೆ ಪ್ರಾರಂಭವಾಯಿತು.

ಸಂಚಿಕೆ ೩೧
ಭೂಮಿಯಿಂದ ಕಾಣುವಂತೆ ಚಂದ್ರ

ಚಂದ್ರ - ಇದು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ. ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು ೩೮೪,೩೯೯ ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು ೧.೩ ಕ್ಷಣಗಳು ಹಿಡಿಯುತ್ತದೆ.

ಚಂದ್ರನ ವ್ಯಾಸವು ೩,೪೭೪ ಕಿ.ಮೀ.ಗಳಿದ್ದು (೨,೧೫೯ ಮೈಲಿಗಳು), (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರಿಯಾದ ಉಪಗ್ರಹವಾಗಿದೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.

ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯು ಸೋವಿಯಟ್ ಒಕ್ಕೂಟಲೂನ ಕಾರ್ಯಕ್ರಮದ ನೌಕೆ. ಅಮೇರಿಕಾ ಸಂಯುಕ್ತ ಸಂಸ್ಥಾನಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನಗಳು ಯಶಸ್ವಿಯಾಗಿ ಪೂರ್ಣಗೊಂಡವು.

ಸಂಚಿಕೆ ೩೨

ಚೆರ್ನೊಬಿಲ್ ದುರಂತವು ಯುಕ್ರೇನ್ನ ಪ್ರಿಪ್ಯಟ್ ನಗರದ ಸಮೀಪದ ಚೆರ್ನೊಬಿಲ್ ಅಣು ಸ್ಥಾವರದಲ್ಲಿ ಏಪ್ರಿಲ್ ೨೬, ೧೯೮೬ರಂದು ಉಂಟಾದ ಸ್ಪೋಟ ಮತ್ತದರ ಪರಿಣಾಮವಾಗಿ ಹರಡಿದ ವಿಕಿರಣದಿಂದ ಉಂಟಾದ ಸಾವು-ನೋವು-ನಷ್ಟಗಳನ್ನು ಒಳಗೊಳ್ಳುತ್ತದೆ. ಈ ದುರಂತವು ಅಣುಶಕ್ತಿಯ ಇತಿಹಾಸದಲ್ಲಿ ಅತ್ಯಂತ ಭೀಕರವಾದುದು. ಇದರಿಂದ ಹರಡಿದ ವಿಕಿರಣಾತ್ಮಕ ಪದಾರ್ಥವು ಅಂದಿನ ಇಡೀ ಸೊವಿಯಟ್ ಒಕ್ಕೂಟ ಮತ್ತು ಯುರೋಪ್ ಅಲ್ಲದೆ ಉತ್ತರ ಅಮೇರಿಕದ ಪೂರ್ವಕ್ಕೂ ತಲುಪಿತ್ತು. ಯುಕ್ರೇನ್, ರಷ್ಯಾ ಮತ್ತು ಬೆಲಾರಸ್ ಪ್ರದೇಶಗಳು ತೀವ್ರವಾಗಿ ಕಲುಷಿತಗೊಂಡು ಸುಮಾರು ೩೩೬,೦೦೦ ಜನರ ಪುನರ್ವಸತಿಯನ್ನು ಕೈಗೊಳ್ಳಬೇಕಾಯಿತು.

ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ (IAEA) ಪ್ರಕಾರ ಈ ದುರಂತದ ನೇರ ಪರಿಣಾಮವಾಗಿ ಉಂಟಾದ ಸಾವುಗಳು ೫೬. ಆದರೆ ವಿಕಿರಣದ ಪರಿಣಾಮಗಳು ಅನೇಕ ವರ್ಷಗಳ ನಂತರ ತಲೆದೋರುವುದರಿಂದ ದುರಂತದ ಸಂಪೂರ್ಣ ಪರಿಣಾಮಗಳನ್ನು ನೇರವಾಗಿ ಅಳೆಯಲಾಗುವುದಿಲ್ಲ. ಈಗ ಸ್ವತಂತ್ರ ರಾಷ್ಟ್ರಗಳಾಗಿರುವ ರಷ್ಯಾ, ಯುಕ್ರೇನ್ ಮತ್ತು ಬೆಲಾರಸ್‍ಗಳು ಇನ್ನೂ ಈ ದುರಂತದ ಬೆಲೆಗಳನ್ನು ತತ್ತುತ್ತಿವೆ.

ಸಂಚಿಕೆ ೩೩

ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್ ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚಾದ್ಯಂತ ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್ ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ.

ಹತ್ತಿಯ ನಾರಿನಿಂದ ಸೆಣೆದ ದಾರದಿಂದ ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್‍ನ ರಚನೆ ಹತ್ತಿಗೆ ಅದರ ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ.

ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ.

ಸಂಚಿಕೆ ೩೪
ಪುಣೆಯ ಶನಿವಾರವಾಡೆ

ಪುಣೆ ಭಾರತಮಹಾರಾಷ್ಟ್ರ ರಾಜ್ಯದ ಒಂದು ಪ್ರಮುಖ ನಗರ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ, ಮುಳಾ ಮತ್ತು ಮುಠಾ ಎಂಬ ನದಿಗಳ ದಂಡೆಯಲ್ಲಿರುವ ಈ ನಗರವು ಪುಣೆ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಪುಣೆ ಮಹಾರಾಷ್ಟ್ರದ ಎರಡನೆಯ ಹಾಗೂ ಭಾರತದ ಏಳನೆಯ ಅತಿದೊಡ್ಡ ನಗರ. ಅನೇಕ ಪ್ರಸಿದ್ಧ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಇಲ್ಲಿರುವ ಕಾರಣ ಇದನ್ನು " ಪೂರ್ವದ ಆಕ್ಸ್‍ಫರ್ಡ್" ಎಂದೂ ಕರೆಯಲಾಗುತ್ತದೆ. ಅನೇಕ ವಾಹನ ಹಾಗೂ ಇಂಜಿನಿಯರಿಂಗ್ ಸಂಬಂಧಪಟ್ಟ ದೊಡ್ಡ ಕೈಗಾರಿಕೆಗಳಿಗೆ ನೆಲೆಯಾಗಿರುವ ಪುಣೆ ದೊಡ್ಡ ಔದ್ಯಮಿಕ ಕೇಂದ್ರವೂ ಹೌದು. ಕಳೆದ ಒಂದೆರಡು ದಶಕಗಳಲ್ಲಿ ಪುಣೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯಮಕ್ಕಾಗಿಯೂ ಹೆಸರಾಗಿದೆ. ೨೦೦೧ರ ಜನಗಣತಿಯ ಪ್ರಕಾರ ಪುಣೆಯ ಜನಸಂಖ್ಯೆ ೪೫ ಲಕ್ಷ. ಬಹಳ ಹಳೆಯ ಇತಿಹಾಸವಿರುವ ಪುಣೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೂ ಹೆಸರಾಗಿದೆ. ಇಲ್ಲಿಯ ಮುಖ್ಯ ಭಾಷೆ ಮರಾಠಿ.

ಸಂಚಿಕೆ ೩೫

ಆನೆಯು ಪ್ರಾಣಿಶಾಸ್ತ್ರದ ಪ್ರಕಾರ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು ಮೂರು ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ : ಆಫ್ರಿಕದ ಪೊದೆಗಳ ಆನೆ, ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ ( ದೈತ್ಯ ಆನೆ ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು. ಆನೆಯು ಇಂದು ಅಳಿವಿನತ್ತ ಸಾಗಿರುವ ಜೀವಿ. ಒಂದೊಮ್ಮೆ ಹಲವು ದಶಲಕ್ಷಗಳಷ್ಟಿದ್ದ ಆಫ್ರಿಕನ್ ಆನೆಗಳ ಸಂಖ್ಯೆ ಇಂದು ೪೭೦,೦೦೦ದಿಂದ ೬೯೦,೦೦೦ ಕ್ಕೆ ಇಳಿದಿದೆ. ವಿಶ್ವದೆಲ್ಲೆಡೆ ಇಂದು ಆನೆಯನ್ನು ಸಂರಕ್ಷಿತ ಜೀವಿಯನ್ನಾಗಿ ಕಾಪಾಡಿಕೊಳ್ಳಲಾಗುತ್ತಿದೆ.

ಸಂಚಿಕೆ ೩೬
ಅಮೆಜಾನ್ ನದಿಯ ಅಳಿವೆ

ಅಮೆಜಾನ್ ದಕ್ಷಿಣ ಅಮೆರಿಕದ ಪ್ರಮುಖ ನದಿ. ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಜಲರಾಶಿಯನ್ನು ಹೊಂದಿದೆ. ಅಲ್ಲದೆ ಒಂದು ವಾದದ ಪ್ರಕಾರ ಅಮೆಜಾನ್ ನದಿಯು ಪ್ರಪಂಚದ ಅತಿ ಉದ್ದವಾದ ನದಿ ಕೂಡ. ಈ ಒಂದು ಮಹಾನದಿಯಲ್ಲಿ ಪ್ರವಹಿಸುವ ನೀರಿನ ಪ್ರಮಾಣವು ನಂತರದ ೮ ಮಹಾನದಿಗಳ ಒಟ್ಟು ನೀರಿನ ಪ್ರಮಾಣಕ್ಕಿಂತ ಅಧಿಕವೆಂದಾದಾಗ ಇದರ ಅಗಾಧತೆಯ ಅರಿವಾಗುವುದು. ಅಮೆಜಾನ್ ನದಿಯು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಲಾನಯನ ಪ್ರದೇಶವನ್ನು ಹೊಂದಿದೆ. ಕೆಲವೊಮ್ಮೆ ಈ ನದಿಗೆ "ಸಿಹಿ ಸಮುದ್ರ" ಎಂಬ ಹೆಸರನ್ನು ಸಹ ಬಳಸುವರು. ಬೇಸಗೆಯಲ್ಲಿ ನದಿಯ ಅತ್ಯಂತ ಹೆಚ್ಚಿನ ಅಗಲ ೧೧ ಕಿ.ಮೀ. ಗಳಾದರೆ ಮಳೆಗಾಲದಲ್ಲಿ ಈ ಮಹಾನದಿಯು ೪೫ ಕಿ.ಮೀ.ನಷ್ಟು ಅಗಲವಾಗಿ ಹರಿಯುವುದು. ಅಮೆಜಾನ್ ನದಿಯು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಾಗಿಸುವ ಸಿಹಿನೀರಿನ ಪ್ರಮಾಣ ಊಹಾತೀತ. ಮಳೆಗಾಲದಲ್ಲಿ ಈ ನದಿಯು ಪ್ರತಿ ಸೆಕೆಂಡಿಗೆ ೩,೦೦,೦೦೦ ಘನ ಮೀಟರುಗಳಷ್ಟು ಸಿಹಿನೀರನ್ನು ಸಾಗರಕ್ಕೆ ಸೇರಿಸುವುದು. ಸಾಗರದ ಮುಖದಲ್ಲಿ ಈ ನದಿಯ ನೀರಿನ ರಭಸ ಹಾಗೂ ಒತ್ತಡ ಎಷ್ಟಿದೆಯೆಂದರೆ ಸಾಗರತೀರದಿಂದ ಹಲವಾರು ಕಿ.ಮೀ.ಗಳ ದೂರದವರೆಗೂ ಸಾಗರದ ನೀರು ಸಿಹಿಯಾಗಿಯೇ ಇರುತ್ತದೆ. ಮಳೆಗಾಲದಲ್ಲಿ ಅಮೆಜಾನ್ ನದಿಯು ಸಾಗರದ ಉಪ್ಪುನೀರನ್ನೇ ಸುಮಾರು ೧೦೦ ಕಿ.ಮೀ.ಗಳಷ್ಟು ಹಿಮ್ಮೆಟ್ಟಿಸುತ್ತದೆ.

ಸಂಚಿಕೆ ೩೭
ಉಂಗುರಕ್ಕೆ ಅಳವಡಿಸಲಾಗಿರುವ ಸುಂದರ ವಜ್ರ

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ. ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗ ತಲುಪಿಸುತ್ತಿವೆ. ಜಗತ್ತಿನ ಒಟ್ಟೂ ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ.

ಸಂಚಿಕೆ ೩೮

ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು ಹಾನಗಲ್ಲಿನಲ್ಲಿ, ೧೯೧೩ ಮಾರ್ಚ ೫ರಂದು.ಆದರೆ ಬಾಲ್ಯದಿಂದಲೆ ಬೆಳೆದಿದ್ದೆಲ್ಲ ಧಾರವಾಡದಲ್ಲಿ.ಇವರ ತಂದೆ ಚಿಕ್ಕೂರಾವ್ ನಾಡಗೀರ,ತಾಯಿ ಅಂಬಾಬಾಯಿ. ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ಆಯಿತು. ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು. ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ, ಹುಬ್ಬಳ್ಳಿಗಳಿಗೆ ಬಂದಾಗಲೊಮ್ಮೆ ಅಂಬಾಬಾಯಿಯವರ ಮನೆಗೆ ಹೋಗಿ ಅವರ ಹಾಡುಗಾರಿಕೆ ಕೇಳುತ್ತಿದ್ದರು. ಬಾಲಿಕೆ ಗಂಗೂಬಾಯಿಯ ಹಾಡುಗಾರಿಕೆಯನ್ನೂ ಅವರು ಮೆಚ್ಚಿದ್ದರು. ಇವೆಲ್ಲ ಕಾರಣವಾಗಿ ಅಂಬಾಬಾಯಿಯವರಿಗೆ ತಮ್ಮ ಮಗಳಿಗೆ ಹಿಂದುಸ್ತಾನಿ ಸಂಗೀತ ಕಲಿಸುವ ಆಸೆಯಿತ್ತು. ಈ ಕಾರಣದಿಂದ ಮನೆಯನ್ನು ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಮೊದಲಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಯಾನೆ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದರು. ತನ್ನ ಕರ್ನಾಟಕ ಸಂಗೀತ ಪದ್ಧತಿಯು ಮಗಳ ಮೇಲೆ ವಿಪರೀತ ಪರಿಣಾಮ ಬೀರಬಾರದೆನ್ನುವ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿಬಿಟ್ಟರು!

ಸಂಚಿಕೆ ೩೯

ಆರೋರಾ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದೆ. ಉತ್ತರಧ್ರುವ ಪ್ರದೇಶದಲ್ಲಿ ಕಾಣುವ ಇಂತಹ ಬಣ್ಣದ ಬೆಳಕಿನಾಟವನ್ನು ಆರೋರಾ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು. ಮೊದಲನೋಟಕ್ಕೆ ಇದು ಬೇರಾವುದೋ ದಿಕ್ಕಿನಲ್ಲಿ ಜರಗುತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ತೆಂಕಣ ಬೆಳಕು) ಎಂದು ಸಹ ಕರೆಯಲಾಗುತ್ತದೆ. ಆರೋರಾ ಬೋರಿಯಾಲಿಸ್ ಸೆಪ್ಟೆಂಬರ್ ಇಂದ ಅಕ್ಟೋಬರ್ ವರೆಗೆ ಮತ್ತು ಮಾರ್ಚ್ ಇಂದ ಏಪ್ರಿಲ್ ವರೆಗೆ ಘಟಿಸುತ್ತದೆ. ದಕ್ಷಿಣಧ್ರುವ ಪ್ರದೇಶದಲ್ಲಿ ಸಂಭವಿಸುವ ಇದೇ ರೀತಿಯ ವಿದ್ಯಮಾನವು ಆರೋರಾ ಆಸ್ಟ್ರಾಲಿಸ್ ಎಂದು ಹೆಸರಾಗಿದೆ. ಭೂಮಿವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲ (ಮ್ಯಾಗ್ನೆಟೋಸ್ಫಿಯರ್)ದಲ್ಲಿನ ವಿದ್ಯುತ್ಪ್ರೇರಿತ ಕಣಗಳು ( + ಅಥವಾ - ಅಯಾನು ಢಿಕ್ಕಿ ಹೊಡೆದಾಗ ಆರೋರಾ ಉಂಟಾಗುತ್ತದೆ. ಈ ಕಣಗಳು ಗಂಟೆಗೆ ೩೦೦ ರಿಂದ ೧೨೦೦ ಕಿ.ಮೀ. ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪ್ರೇರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೇಜಿತವಾಗುತ್ತವೆ. ಕೊಂಚ ಸಮಯದ ನಂತರ ಅನಿಲಗಳ ಪರಮಾಣುಗಳು ತಾವು ಸೌರ ಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಅಗಾಧ ಸಂಖ್ಯೆಯ ಪರಮಾಣುಗಳು ಒಮ್ಮೆಲೇ ಹೀಗೆ ಶಕ್ತಿಯನ್ನು ಬೆಳಕಾಗಿ ಹೊರಹಾಕಿದಾಗ ಆಗಸದಲ್ಲಿ ವರ್ಣರಂಜಿತ ಬೆಳಕಿನಾಟ ಕಾಣಿಸುವುದು. ಇದೇ ಆರೋರಾ.

ಸಂಚಿಕೆ ೪೦
ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ. ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ.

ಸಂಚಿಕೆ ೪೧
ನೇಕಾರ ಇರುವೆ.

ಇರುವೆಯು ಪ್ರಾಣಿಶಾಸ್ತ್ರದ ವರ್ಗೀಕರಣದ ಪ್ರಕಾರ ಹೈಮೆನೋಪೆಟ್ರಾ ವರ್ಗದಲ್ಲಿ ಫಾರ್ಮಿಸೀಡೇ ಕುಟುಂಬಕ್ಕೆ ಸೇರಿದ ಜೀವಿ. ಕಣಜ ಮತ್ತು ದುಂಬಿಗಳು ಸಹ ಈ ವರ್ಗಕ್ಕೆ ಸೇರಿದ ಜೀವಿಗಳಾಗಿವೆ. ಇರುವೆಗಳಲ್ಲಿ ೧೨,೦೦ ಕ್ಕೂ ಅಧಿಕ ತಳಿಗಳಿವೆ. ಉಷ್ಣವಲಯದಲ್ಲಿ ಇರುವೆಗಳ ಪ್ರಬೇಧ ಉಳಿದೆಡೆಗಿಂತ ಹೆಚ್ಚು. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ. ಇರುವೆಗಳ ಒಂದು ಗೂಡಿನಲ್ಲಿ ಕಲವೊಮ್ಮೆ ಲಕ್ಷಾಂತರ ಇರುವೆಗಳು ನೆಲೆಸುವುದುಂಟು. ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಅರೆಬಂಜೆ ಅಥವಾ ಪೂರ್ಣಬಂಜೆ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ. ರಾಣಿಯ ಹೊರತಾಗಿ ಇತರ ಹೆಣ್ಣಿರುವೆಗಳು ಕೆಲಸಗಾರ ಇರುವೆಗಳು (ಹಲ ಜಾತಿಯವು), ಸೈನಿಕ ಇರುವೆಗಳೆಂದು ಇನ್ನೆರಡು ಉಪಗುಂಪುಗಳಿಗೆ ಸೇರಿರುತ್ತವೆ. ಗಂಡಿರುವೆಯನ್ನು ಡ್ರೋನ್ ಎಂದು ಸಹ ಕರೆಯಲಾಗುವುದು. ನೆಲದಡಿಯಲ್ಲಿನ ಇರುವೆಗೂಡು ಬಲು ವಿಸ್ತಾರವಾದ ಪ್ರದೇಶವನ್ನು ಆವರಿಸಿರುತ್ತದೆ. ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ. ಆದರೆ ಅಂಟಾರ್ಕಟಿಕ, ಗ್ರೀನ್‍ಲ್ಯಾಂಡ್, ಐಸ್ಲೆಂಡ್, ಹವಾಯ್, ಮತ್ತು ಪಾಲಿನೇಷ್ಯಾಗಳಲ್ಲಿ ಸ್ಥಳೀಯ ಇರುವೆಗಳು ಕಂಡುಬರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ ೧೫% ದಿಂದ ೨೫% ರಷ್ಟಾಗುವುದು. ಬಿಳಿ ಇರುವೆಯೆಂದು ಕರೆಯಲ್ಪಡುವ ಗೆದ್ದಲು ಹುಳಗಳು ಇರುವೆಗಳಂತೆಯೇ ಸಂಘಟಿತ ಕುಟುಂಬಜೀವಿಗಳಾದರೂ ಇರುವೆಗಳ ಗುಂಪಿಗೆ ಸೇರಿಲ್ಲ. ಹಾಗೆಯೇ ದೊಡ್ಡ ಇರುವೆಯನ್ನು ಹೋಲುವ ವೆಲ್ವೆಟ್ ಇರುವೆಯು ವಾಸ್ತವದಲ್ಲಿ ರೆಕ್ಕೆರಹಿತ ಹೆಣ್ಣು ಕಣಜ.

ಸಂಚಿಕೆ ೪೨
ತಾಯಿಯ ಹಾಲನ್ನು ಹೀರುತ್ತಿರುವ ಒಂದು ಆಡಿನ ಮರಿ.

ಹಾಲು ಹೆಣ್ಣು ಸಸ್ತನಿಗಳ ಸ್ತನಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಒಂದು ಅಪಾರದರ್ಶಕ ಬಿಳಿ ದ್ರವ. ಸಸ್ತನಿ ಪ್ರಾಣಿಗಳ (ಮಾನವನೂ ಸೇರಿದಂತೆ) ಹೆಣ್ಣುಗಳ ಹಾಲಿನ ಉತ್ಪಾದನಾ ಸಾಮರ್ಥ್ಯವು ಈ ಗುಂಪಿನ ಬಲು ಮುಖ್ಯ ಜೈವಿಕ ಗುಣವಾಗಿದೆ. ಹಾಲು ನವಜಾತ ಶಿಶುಗಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುವುದು. ಶಿಶು(ಮರಿ)ಗಳು ಬೇರೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆಯುವವರೆಗೂ ಅವುಗಳಿಗೆ ತಾಯಹಾಲೇ ಏಕೈಕ ಆಹಾರ. ಶಿಶುವಿನ ಜನನದ ಅಲ್ಪಕಾಲದಲ್ಲಿಯೇ ಉತ್ಪತ್ತಿಯಾಗುವ ಹಾಲು ತಾಯಿಯ ದೇಹದಿಂದ ಪ್ರತಿಕಣಗಳನ್ನು ಶಿಶುವಿನ ದೇಹಕ್ಕೆ ಒಯ್ಯುತ್ತದೆ. ಶಿಶುವಿಗೆ ಇದು ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ನೀಡುವುದು. ಹಾಲಿನಲ್ಲಿನ ಅಂಶಗಳು ಬೇರೆಬೇರೆ ಪ್ರಾಣಿಗಳಲ್ಲಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸಾಂದ್ರ ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್-ಸಿ ಗಳು ಗಣನೀಯ ಪ್ರಮಾಣದಲ್ಲಿರುತ್ತವೆ. ಹಾಲು ಎರಡು ಸ್ಪಷ್ಟ ಬಗೆಗಳಲ್ಲಿ ಬಳಕೆಯಾಗುತ್ತದೆ. ಎಲ್ಲಾ ಸಸ್ತನಿ ಪ್ರಾಣಿಗಳ ಶಿಶುಗಳಿಗೆ ಪೋಷಕಾಂಶಗಳ ಪ್ರಾಕೃತಿಕ ಮೂಲವಾಗಿ ಮತ್ತು ಮಾನವನು ಇತರ ಪ್ರಾಣಿಗಳಿಂದ ದೊರಕಿಸಿಕೊಂಡ ಆಹಾರದ ರೂಪದಲ್ಲಿ. ಹೆಚ್ಚೂಕಡಿಮೆ ಎಲ್ಲಾ ಸಸ್ತನಿಗಳೂ ಸ್ತನ್ಯಪಾನದ ಮೂಲಕ ತಮ್ಮ ಶಿಶುಗಳಿಗೆ ಹಾಲೂಡುತ್ತವೆ. ಕೆಲ ಮಾನವ ಸಂಸ್ಕೃತಿಗಳಲ್ಲಿ ೭ನೆಯ ವಯಸ್ಸಿನವರೆಗೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ವಾಡಿಕೆ ಇದೆ. ವಿಶ್ವದೆಲ್ಲೆಡೆ ಮಾನವನು ತನ್ನ ಶೈಶವಾವಸ್ಥೆಯನ್ನು ದಾಟಿದ ಮೇಲೆ ಕೂಡ ಹಾಲಿನ ಸೇವನೆಯನ್ನು ಮುಂದುವರಿಸುವನು. ಇದಕ್ಕಾಗಿ ಅವನು ಇತರ ಪ್ರಾಣಿಗಳಿಂದ ಹಾಲನ್ನು ಕರೆದುಕೊಳ್ಳುವನು. ಇವುಗಳಲ್ಲಿ ಹಸುವಿನ ಹಾಲು ಅತಿ ಹೆಚ್ಚಾಗಿ ಬಳಕೆಯಲ್ಲಿದೆ.

ಸಂಚಿಕೆ ೪೩
ಜೆ ಆರ್ ಡಿ ಟಾಟಾ

ಜೆ.ಆರ್.ಡಿ. ಟಾಟಾ (ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟಾ) (ಜುಲೈ ೨೯, ೧೯೦೪ - ನವೆಂಬರ್ ೨೯, ೧೯೯೩) ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಭಾರತೀಯ ವಾಯುಯಾನದ ಹರಿಕಾರರು. ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ, ಕೈಹಿಡಿದು ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ತ್ರಿವಿಕ್ರಮ ಹೆಜ್ಜೆಗಳ ಛಾಪನ್ನು ಮೂಡಿಸಿದ ಭಾರತದ ಸುಪುತ್ರರು. ಟಾಟಾರವರ ಉತ್ಪಾದನೆ ಉಕ್ಕಿನಿಂದ ಪ್ರಾರಂಭಿಸಿ,ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಾಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಕಾಗದ, ಮಾಹಿತಿತಂತ್ರಜ್ಞಾನ, ಉಪ್ಪು, ಸಾಬೂನು, ಶ್ಯಾಂಪೂ, ಟೀ, ಕಾಫಿ, ಹೆಂಗೆಳೆಯರ ಸೌಂದರ್ಯವರ್ಧಕ ಪರಿಕರಗಳು ಇತ್ಯಾದಿಗಳವರೆಗೆ ಇದೆ. ಇನ್ನೂ ಬೆಳೆಯುತ್ತಲೇ ಇದೆ. ಸಂಪ್ರದಾಯಶೀಲ ಪಾರ್ಸಿ ಝೊರಾಸ್ಟ್ರಿಯನ್ ಕುಟುಂಬದಲ್ಲಿ ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಜೆಹಾಂಗೀರ್ (ಎಲ್ಲರೂ ಅವರನ್ನು ’ಜೆ’ ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಶಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ. ಅವರ ವಿಧ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಜೆ ರವರಿಗೆ ಫ್ರೆಂಚ್ ಭಾಷೆಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲ. ಜೆ ರವರ ಇಂಗ್ಲಿಷ್ ಭಾಷೆಯನ್ನು ಉತ್ತಮಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ ’ಕ್ರಾಮರ್’ ಶಾಲೆಯಲ್ಲಿ ಭರ್ತಿಮಾಡಲಾಗಿತ್ತು. ನಂತರ ಅವರಿಗೆ, ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ, ರೆಜಿಮೆಂಟ್ ಡಿ ಸ್ಪಾಹಿಸ್ ಗೆ ಸೇರಿದರು.

ಸಂಚಿಕೆ ೪೪
ಹವಾಯ್‌ನ ಜ್ವಾಲಾಮುಖಿ ಒಂದರಿಂದ ೧೦ ಮೀ. ಎತ್ತರದ ಲಾವಾದ ಚಿಲುಮೆ

ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ. ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸಾರಿದಾಗ ಇಲ್ಲವೇ ಪರಸ್ಪರರಿಂದ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್ ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ದಲ್ಲಿ ತಟ್ಟೆಗಳು ಪರಸ್ಪರರ ಬಳಿ ಸಾರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು. ಇಂತಹ ಜ್ವಾಲಾಮುಖಿಗಳು ಆಫ್ರಿಕದ ಬಿರುಕು ಕಣಿವೆ ಮತ್ತು ಅಮೆರಿಕದ ರಿಯೊ ಗ್ರಾಂಡ್ ಬಿರುಕಿನಲ್ಲಿ ಕಾಣಬರುತ್ತವೆ. ಇನ್ನು ಕೆಲವೇಳೆ ಟೆಕ್ಟಾನಿಕ್ ತಟ್ಟೆಗಳ ಅಂಚಿನಿಂದ ಬಲುದೂರದಲ್ಲಿ ಸಹ ಜ್ವಾಲಾಮುಖಿಗಳು ಇರುತ್ತವೆ. ಹವಾಯ್ ದ್ವೀಪದ ಜ್ವಾಲಾಮುಖಿಗಳು ಇದಕ್ಕೆ ಉದಾಹರಣೆ. ಇಂತಹವನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಇಂತಹ ಬಿಸಿ ಸ್ಥಾನಗಳು ಭೂಮಿ ಮಾತ್ರವಲ್ಲದೆ ಸೌರಮಂಡಲದ ಇತರ ಗ್ರಹಗಳಲ್ಲಿ ಮತ್ತು ಉಪಗ್ರಹಗಳಲ್ಲಿ ಸಹ ಇರುವುವು.

ಸಂಚಿಕೆ ೪೫
ಉಪಗ್ರಹ ಸಮೂಹ

‘’’ಗ್ಲೋಬಲ್ ನೇವಿಗೇಶನ್ ಸ್ಯಾಟಲ್ಲೈಟ್ ಸಿಸ್ಟಂ”’ (Global Navigation Satellite System) ಎಂಬುದು ಜಾಗತಿಕ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆಯಾಗಿದೆ. ಕೃತಕ ಉಪಗ್ರಹಗಳು ಬಿತ್ತರಿಸುವ ಮಾಹಿತಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಆಲಿಸುವ ರಿಸೀವರ್‌ಗಳು ತಮ್ಮ ಸ್ಥಾನ, ವೇಗ, ಹಾಗೂ ತಾನು ಚಲಿಸುತ್ತಿರುವ ದಿಕ್ಕನ್ನು ನಿರ್ಣಯಿಸಬಲ್ಲವು.

"ಜಿಪಿಎಸ್" ಅಥವಾ "ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ" ಎಂಬುದು ಇಂತಹ ಒಂದು ವ್ಯವಸ್ಥೆಯಾಗಿದೆ. ಇದು ಅಮೇರಿಕ ದೇಶವು ಅಭಿವೃದ್ಧಿಪಡಿಸಿ ಕಾರ್ಯಕ್ಕಿಳಿಸಿದ ವ್ಯವಸ್ಥೆಯಾಗಿದ್ದು ಇದರ ಅಧಿಕೃತ ಹೆಸರು ”’ನ್ಯಾವ್‌ಸ್ಟಾರ್ ಜಿಪಿಎಸ್”’ ಎಂಬುದಾಗಿದೆ. ಇದರ ನಿರ್ವಹಣೆ ಹಾಗೂ ನಿಯಂತ್ರಣ ಅಮೇರಿಕ ದೇಶದ ವಾಯು ಸೇನೆಯ ಕೈಯಲ್ಲಿದ್ದು ಇದರ ಉಸ್ತುವಾರಿಗಾಗಿ (ಉಪಗ್ರಹ ಬದಲಾವಣೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸೇರಿದಂತೆ) ವಾರ್ಷಿಕ ೭೫೦ ಯು.ಎಸ್. ಡಾಲರ್ಗಳನ್ನು ವ್ಯಯಿಸಲಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಜಿಪಿಎಸ್ ವ್ಯವಸ್ಥೆಯು ಅಮೆರಿಕದ ಸೈನಿಕ ಬಳಕೆಗಳಿಗಾಗಿ ಅಭಿವೃದ್ಧಿ ಪಡಿಸಿದ್ದಾದರೂ, ಜಗತ್ತಿನಾದ್ಯಂತ ನಾಗರಿಕ ಉಚಿತ ಬಳಕೆಗಳಿಗಾಗಿ ಇದನ್ನು ನೀಡಲಾಗಿದೆ. ಜಿಪಿಎಸ್ ವ್ಯವಸ್ಥೆಯನ್ನು ದಿಕ್ಸೂಚಿಯಾಗಿ ಮಾತ್ರವಲ್ಲದೆ, ನಕಾಶೆ ತಯಾರಿಸಲು, ಸರ್ವೇಕ್ಷಣೆ ಕಾರ್ಯಗಳಿಗಾಗಿ, ವಾಣಿಜ್ಯ ಹಾಗೂ ವೈಜ್ಞಾನಿಕ ಕಾರ್ಯಗಳಿಗಾಗಿ ಕೂಡ ಬಳಸಲಾಗುತ್ತಿದೆ. ಅಲ್ಲದೆ ಇದನ್ನು ನಿಖರವಾದ ಸಮಯದ ಆಧಾರವಾಗಿ ಉಪಯೋಗಿಸಲಾಗುತ್ತಿದೆ.

ಸಂಚಿಕೆ ೪೬

ಭಾರತದ ಸ್ವಾತಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿ ಈಸ್ಟ್ ಇಂಡಿಯ ಕಂಪನಿಯು, ವಂಗದ ಅಧಿಕಾರವನ್ನು ಪಡೆದುಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಕೈವಶ ಮಾಡಿಕೊಂಡಿತು. ೧೦೦ ವರ್ಷಗಳ ನಂತರ ೧೮೫೭ರಲ್ಲಿ ಆಂಗ್ಲರ ದಬ್ಬಾಳಿಕೆಯ ವಿರುದ್ಧ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ವಿಫಲವಾಯಿತು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗತು.

೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಅಹಿಂಸಾತ್ಮಕ ಅಸಹಕಾರ ಚಳವಳಿಯು ಹೋರಾಟಕ್ಕೆ ಮಹತ್ವದ ದಿಕ್ಕು ನೀಡಿತು. ೧೯೪೨ರಲ್ಲಿ ಬ್ರಿಟಿಷರು "ಭಾರತ ಬಿಟ್ಟು ತೊಲಗಿ" ಎನ್ನುವ ಒತ್ತಾಯದ ಬೇಡಿಕೆಯನ್ನು ಕಾಂಗ್ರೆಸ್ ಮಾಡಿತು. ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೯೪೭ಆಗಸ್ಟ್ ೧೫ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯಿತು.

ಸಂಚಿಕೆ ೪೭

ಮೂರನೆಯ ಪಾಣಿಪತ್ ಯುದ್ಧ ೧೭೬೧ಜನವರಿ ೧೪ರಂದು ಇಂದಿನ ಹರ್ಯಾಣದಲ್ಲಿರುವ ಪಾಣಿಪತ್‍ನಲ್ಲಿ (29.39° N 76.97° E) ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ (ಅಹ್ಮದ್ ಶಾಹ್ ಅಬ್ದಾಲಿ) ನೇತೃತ್ವದ ಅಫ್ಘಾನಿ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ಮೂರನೆಯ ಯುದ್ಧ. ಈ ಯುದ್ಧದಲ್ಲಿ ಫ್ರೆಂಚರಿಂದ ಮದ್ದು ಗುಂಡು ಮತ್ತಿ ತರಬೇತಿ ಗಳಿಸಿದ್ದ ಮರಾಠರಿಗೂ, ಅಹಮದ್ ಶಾ ಅಬ್ದಾಲಿಯ ಸಬಲ ಕುದುರೆ ಕಾಳಗ ನಿಪುಣರ ಮಧ್ಯೆ ಮುಖಾಮುಖಿಯಾಯಿತು.

ಮುಘಲ ಸಾಮ್ರಾಜ್ಯ ಶಿಥಿಲವಾಗುತ್ತಿರುವುದರ ಲಾಭ ಪಡೆದ ಮರಾಠರ ಒಕ್ಕೂಟವು ತನ್ನ ರಾಜ್ಯವನ್ನು ವಿಸ್ತರಿಸತೊಡಗಿತು. ಇದರಿಂದ ಅಸಮಾಧಾನಗೊಂಡ ಅಹಮದ್ ಶಾ ಅಬ್ದಾಲಿಯೂ ೧೭೫೯ರಲ್ಲಿ ಮರಾಠರ ಸಣ್ಣ ಪುಟ್ಟ ಸೈನ್ಯಗಳ ಮೇಲೆ ವಿಜಯ ಸಾಧಿಸಿದ. ಇದರಿಂದ ಕುಪಿತರಾದ ಮರಾಠರು ಸದಾಶಿವರಾವ್ ಭಾವುವಿನ ಮುಖಂಡತ್ವದಲ್ಲಿ ೧೦೦,೦೦೦ ಜನರ ಸೈನ್ಯದೊಂದಿಗೆ ದೆಹಲಿಯನ್ನು ದಾಳಿ ಮಾಡಿ ನಗರವನ್ನು ಹಾಳುಗೆಡವಿದರು. ಇದರ ನಂತರ ಕರ್ನಾಲ್ ಮತ್ತು ಕುಂಜುಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಹಮದ್ ಶಾಹನಿಗೂ ಸಣ್ಣಪುಟ್ಟ ತಿಕ್ಕಾಟಗಳು ಆದವು. ಅನೇಕ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ೧೨೫,೦೦೦ ಸೈನಿಕರು ಪಾಲ್ಗೊಂಡಿದ್ದರು. ಮರಾಠರ ಅನೇಕ ತುಕಡಿಗಳನ್ನು ಧ್ವಂಸ ಮಾಡಿದ ಅಬ್ದಾಳಿಯ ಸೈನ್ಯ ವಿಜಯಶಾಲಿಯಾಯಿತು. ಯುದ್ಧದಲ್ಲಿ ಸುಮಾರು ೬೦,೦೦೦-೭೦,೦೦೦ ಜನ ಸತ್ತಿರಬೇಕು ಎಂದು ಅಂದಾಜಿದೆ. ಸದಾಶಿವರಾವರಾವ್ ಭಾವು ಈ ಯುದ್ಧದಲ್ಲಿ ಮಡಿದನು. ಈ ಯುದ್ಧದ ಅತ್ಯಂತ ಮಹತ್ವದ ಪರಿಣಾಮವಾಗಿ ಮರಾಠರ ಉತ್ತರ ಭಾರತದತ್ತ ರಾಜ್ಯ ವಿಸ್ತಾರ ಕೊನೆಗೊಂಡಿತು.

ಸಂಚಿಕೆ ೪೮

ಮಂಗಳೂರು (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್) ಕರ್ನಾಟಕದ ನೈರುತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ.

ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ. ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.

ಸಂಚಿಕೆ ೪೯
ಪಶ್ಚಿಮ ಘಟ್ಟಗಳ ಒಂದು ನೋಟ

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ. ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.

ಸಂಚಿಕೆ ೫೦

ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀರಾತುಗಳು ಗುರುತಿನ ಪ್ರತಿ ಅಭಿಪ್ರಾಯ (ಬ್ರ್ಯಾಂಡ್ ಇಮೇಜ್) ಮತ್ತು ಗುರುತಿನ ಪ್ರತಿ ನಿಷ್ಠೆಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತುಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ. ದೂರದರ್ಶನ, ರೇಡಿಯೋ, ಚಲನಚಿತ್ರ, ಪತ್ರಿಕೆಗಳು, ವೀಡಿಯೋ ಗೇಮ್ಸ್, ಅಂತರಜಾಲ ಮತ್ತು ಜಾಹೀರಾತು ಫಲಕ ಸಹಿತ ಪ್ರತಿಯೊಂದು ಪ್ರಮುಖ ಮಾಧ್ಯಮ ಈ ಸಂದೇಶಗಳನ್ನು ತಲುಪಿಸಲು ಉಪಯೋಗಿಸಲ್ಪಡುತ್ತದೆ. ಅನೇಕ ಸಲ, ಒಂದು ಕಂಪನಿ ಅಥವಾ ಇತರ ಸಂಸ್ಥೆಯ ಪರವಾಗಿ ಒಂದು ಜಾಹೀರಾತು ಸಂಸ್ಥೆ ಜಾಹೀರಾತುಗಳನ್ನು ಇರಿಸುತ್ತದೆ.

ಜಾಹೀರಾತು ಆರ್ಥಿಕ ಪ್ರಗತಿಗೆ ಅನಿವಾರ್ಯವೆಂದು ತೋರಬಹುದಾದರೂ, ಇದು ಸಾಮಾಜಿಕ ಹಾನಿಗಳಿಲ್ಲದೆ ಇಲ್ಲ. ಅನಪೇಕ್ಷಿತ ಇ-ಅಂಚೆ (ಸ್ಪ್ಯಾಮ್) ಬಹಳ ಪ್ರಚಲಿತವಾಗಿ ಈ ಸೇವೆಗಳನ್ನು ಬಳಸುವವರಿಗೆ ಒಂದು ಪ್ರಮುಖ ಪೀಡೆಯಾಗಿದೆ ಮತ್ತು, ಅಂತರಜಾಲ ಸೇವಾ ಪ್ರಬಂಧಕರ ಮೇಲೆ ಕೂಡ ಒಂದು ಆರ್ಥಿಕ ಹೊರೆಯಾಗಿದೆ. ಜಾಹೀರಾತು, ಶಾಲೆಗಳಂತಹ ಸಾರ್ವಜನಿಕ ಪ್ರದೇಶಗಳನ್ನು ಹೆಚ್ಚೆಚ್ಚು ಅತಿಕ್ರಮಿಸುತ್ತಿದ್ದು, ಕೆಲವು ವಿಚಾರಕರು ಇದನ್ನು ಒಂದು ವಿಧದ ಮಕ್ಕಳ ಶೋಷಣೆಯೆಂದು ಪ್ರತಿಪಾದಿಸುತ್ತಾರೆ.

ಸಂಚಿಕೆ ೫೧

ಚಾರ್ಲ್ಸ್ ರಾಬರ್ಟ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ಹಡಗಿನಲ್ಲಿ ಭೂರಚನಶಾಸ್ತ್ರ ವಿಜ್ಞಾನಿಯಾಗಿ ಪ್ರವಾಸ ಕೈಗೊಂಡಾಗ ನಡೆಸಿದ ಸಂಶೊಧನೆಯಿಂದ ಮೊದಲು ಪ್ರಖ್ಯಾತರಾದರು. ಅದೇ ಸಮಯದಲ್ಲಿ ಅನೇಕ ಜೀವ ಪಳಯುಳಿಕೆಗಳನ್ನೂ ಸಂಗ್ರಹಿಸಿ, ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಇದೆಲ್ಲವನ್ನೂ ವಿವರಿಸಲು "ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ" ಸಿದ್ಧಾಂತವನ್ನು ೧೮೫೮ರಲ್ಲಿ ಮಂಡಿಸಿದರು. ೧೮೫೯ರಲ್ಲಿ ಈ ಸಿದ್ಧಾಂತವನ್ನು ವಿವರವಾಗಿ ಬಣ್ಣಿಸುವ ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಎಂಬ ಭವ್ಯಕೃತಿಯನ್ನು ಪ್ರಕಟಿಸಿದರು.

ಸಂಚಿಕೆ ೫೨

ಹುಲಿ ( ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್ ) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ. ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯ ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.

ಸಂಚಿಕೆ ೫೩

ಹಿಮನದಿ ಒಂದು ಬೃಹತ್ ಗಾತ್ರದ ನಿಧಾನವಾಗಿ ಚಲಿಸುವ ಹಿಮಗಡ್ಡೆಯ ರಾಶಿ. ಹಿಮನದಿಯ ರಚನೆಯು ಪದರ ಪದರವಾಗಿ ಸಂಗ್ರಹವಾಗುವ ಹಿಮಪಾತದ ಸಂಕೋಚನದಿಂದ ಉಂಟಾಗುತ್ತದೆ. ಕ್ರಮೇಣ ಈ ಹಿಮರಾಶಿಯು ಬಿರಿದು ಭೂಮಿಯ ಗುರುತ್ವಾಕರ್ಷಣೆ ಮತ್ತು ಅತಿ ಒತ್ತಡದ ಕಾರಣದಿಂದ ಸರಿದು ನೀರಾಗಿ ಹರಿಯತೊಡಗುತ್ತದೆ. ಹಿಮನದಿ ವಿಶ್ವದಲ್ಲಿ ಸಿಹಿನೀರಿನ ಅತಿ ದೊಡ್ಡ ಆಕರವಾಗಿದೆ. ಮಹಾಸಾಗರಗಳ ನಂತರ ಹಿಮನದಿಗಳು ಜಗತ್ತಿನ ಎರಡನೆಯ ಅತಿ ದೊಡ್ಡ ಜಲಸಮೂಹಗಳಾಗಿವೆ. ಧ್ರುವ ಪ್ರದೇಶಗಳ ಬಹುಪಾಲು ಪ್ರದೇಶವನ್ನು ಹಿಮನದಿಗಳು ಆವರಿಸಿವೆ. ಇದಲ್ಲದೆ ಜಗತ್ತಿನ ಎಲ್ಲಾ ಭೂಖಂಡಗಳ ಉನ್ನತ ಪರ್ವತಪ್ರಾಂತ್ಯಗಳಲ್ಲಿ ಸಹ ಹಿಮನದಿಗಳಿವೆ. ಹಿಮನದಿಗಳು ಜಗತ್ತಿನ ವಾತಾವರಣ ಮತ್ತು ಹವಾಮಾನದ ಅತಿ ಸೂಕ್ಷ್ಮ ಪರಿವೀಕ್ಷಕಗಳಾಗಿದ್ದು ಸಾಗರಗಳ ನೀರಿನ ಮಟ್ಟದಲ್ಲಿನ ಏರುಪೇರಿನ ನಿಖರ ಸೂಚಕಗಳು ಸಹ ಆಗಿವೆ. ಇಂದು ಜಾಗತಿಕ ತಾಪಮಾನದಲ್ಲಿ ಉಂಟಾಗಿರುವ ಹೆಚ್ಚಳದಿಂದಾಗಿ ಹಿಮನದಿಗಳು ಒಂದೇಸಮನೆ ಕುಗ್ಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಇನ್ನು ಕೆಲ ದಶಕಗಳಲ್ಲಿ ಹಿಮಾಲಯದ ಎಲ್ಲಾ ಹಿಮನದಿಗಳು ಮಾಯವಾಗಲಿವೆ. ಭಾರತದ ಹಿಮಾಲಯ ಪರ್ವತಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. ಗಂಗೋತ್ರಿ ಹಿಮನದಿ, ಸಿಯಾಚೆನ್ ಹಿಮನದಿ, ಪಿಂಡಾರಿ ಹಿಮನದಿ ಇವುಗಳಲ್ಲಿ ಹೆಸರಾದವು.

ಸಂಚಿಕೆ ೫೪

ರಷ್ಯಾ (Russian: Россия), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯದಲ್ಲಿರುವ ಒಂದು ದೇಶ. ಇದೊಂದು ೮೩ ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್‌, ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ಜಗತ್ತಿನ ಎಂಟನೇ ಒಂದು ಭಾಗದಷ್ಟು ಭೂಪ್ರದೇಶದಲ್ಲಿ ಹರಡಿಕೊಂಡಿರುವ ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ. ಇದು ಯೂರೋಪ್‌ನ ೪೦% ಭಾಗವನ್ನು ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ನಿಕ್ಷೇಪಗಳಿವೆ.

ಸಂಚಿಕೆ ೫೫

ಟೇಬಲ್‌ ಟೆನ್ನಿಸ್‌ ಎರಡು ಅಥವಾ ನಾಲ್ಕು ಆಟಗಾರರು ಹಗುರವಾದ ಟೊಳ್ಳು ಚೆಂಡನ್ನು ರ್‍ಯಾಕೆಟ್‍‍‍ನಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಹೊಡೆಯುವ ಆಟ. ಈ ಆಟವನ್ನು ನೆಟ್‌‍ನಿಂದ ವಿಭಾಗಿಸಿದ ಗಟ್ಟಿ ಮೇಜಿನ ಮೇಲೆ ಆಡಲಾಗುತ್ತದೆ. ಮೊದಲ ಸರ್ವ್‌ನಲ್ಲಿ ಮಾತ್ರ ಬಿಟ್ಟು ಉಳಿದ ಸರ್ವ್‌ಗಳಲ್ಲಿ ಆಟಗಾರರು ಚೆಂಡು ತಮ್ಮ ಕಡೆ ಒಂದು ಬಾರಿ ಮಾತ್ರ ಪುಟಿಯಲು ಅವಕಾಶ ಕೊಟ್ಟು ಇನ್ನೊಂದು ಕಡೆಯ ಮೇಜಿನ ಮೇಲೆ ಬೀಳುವಂತೆ ಮಾಡಬೇಕು. ನಿಯಮದಂತೆಯೇ ಚೆಂಡನ್ನ ಹಿಂತಿರುಗಿಸಲು ಆಟಗಾರ ವಿಫಲನಾದಾಗ ಅಂಕಗಳು (ಪಾಯಿಂಟುಗಳು)ಲೆಕ್ಕ ಮಾಡಲ್ಪಡುತ್ತವೆ. ಆಟವು ವೇಗವಾಗಿದ್ದು, ಶೀಘ್ರ ಪ್ರತಿಕ್ರಿಯೆಯನ್ನು ಕೋರುತ್ತದೆ. ಕೌಶಲ್ಯಯುತ ಆಟಗಾರ ಚೆಂಡಿಗೆ ಅನೇಕ ವಿಧದ ಗಿರಕಿ(ಸುತ್ತಿಸು)ಗಳನ್ನು ಹೊಡೆಯುವಂತೆ ಮಾಡುತ್ತಾನೆ, ಅದು ತನ್ನ ಮಾರ್ಗವನ್ನು ಬದಲಾಯಿಸುತ್ತದೆ ಮತ್ತು ಅನೂಕೂಲಗಳನ್ನುಂಟು ಮಾಡುತ್ತಾ ಎದುರಾಳಿಯ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ. ಆಟವನ್ನು ೧೯೨೬ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ(ITTF) ನಿಯಂತ್ರಿಸುತ್ತದೆ. ೧೯೮೮ರಿಂದ ಟೇಬಲ್ ಟೆನ್ನಿಸ್ ಒಲಂಪಿಕ್ ಕ್ರೀಡೆಯಾಗಿದೆ, ಅದರಲ್ಲಿ ನಾಲ್ಕು ವಿಧದ ಪಂದ್ಯಗಳನ್ನು ಒಳಗೊಂಡಿರುತ್ತದೆ. ೧೯೮೮ ರಿಂದ ೨೦೦೪ರವರೆಗೆ ಆಡಿದ ಪಂದ್ಯಗಳೆಂದರೆ ಪುರುಷರ ಸಿಂಗಲ್ಸ್‌, ಮಹಿಳೆಯರ ಸಿಂಗಲ್ಸ್, ಪುರುಷ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್.

ಸಂಚಿಕೆ ೫೬

ವಿಠ್ಠಲ, ವಿಠೋಬಾ ಮತ್ತು ಪಾಂಡುರಂಗ ಎಂದೂ ಪರಿಚಿತನಿರುವ, ಮುಖ್ಯವಾಗಿ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಆರಾಧಿಸಲಾಗುವ ಒಬ್ಬ ಹಿಂದೂ ದೇವರು. ಅವನನ್ನು ಸಾಮಾನ್ಯವಾಗಿ ಹಿಂದೂ ವಿಷ್ಣು ಅಥವಾ ಅವನ ಅವತಾರನಾದ ಕೃಷ್ಣ ಅಥವಾ, ಪ್ರಾಸಂಗಿಕವಾಗಿ, ಅವನ ಅವತಾರ ಬುದ್ಧನ ಒಂದು ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಅವನನ್ನು ಶಿವನೊಂದಿಗೂ ಸಂಬಂಧಿಸಲಾಗುತ್ತದೆ. ವಿಠ್ಠಲನನ್ನು ಹಲವುವೇಳೆ, ಸೊಂಟದ ಮೇಲೆ ಕೈಯಿಟ್ಟುಕೊಂಡು ಒಂದು ಇಟ್ಟಿಗೆಯ ಮೇಲೆ ನಿಂತಿರುವ, ಕೆಲವೊಮ್ಮೆ ಅವನ ಮುಖ್ಯ ಪತ್ನಿಯಾದ ರಖುಮಾಯಿ (ರುಕ್ಮಿಣಿ) ಜೊತೆಯಲ್ಲಿರುವಂತೆ, ಒಬ್ಬ ಕಪ್ಪು ಬಣ್ಣದ ಬಾಲಕನನ್ನಾಗಿ ಚಿತ್ರಿಸಲಾಗುತ್ತದೆ. ವಿಠ್ಠಲನು ಮಹಾರಾಷ್ಟ್ರದ ಏಕದೇವತಾವಾದಿ ಬ್ರಾಹ್ಮಣೇತರ ವಾರಕರೀ ಪಂಥ ಮತ್ತು ಕರ್ನಾಟಕದ ಹರಿದಾಸ ಪಂಥಗಳ ಕೇಂದ್ರಬಿಂದುವಾಗಿದ್ದಾನೆ. ವಿಠ್ಠಲನ ಮುಖ್ಯ ದೇವಸ್ಥಾನ, ಕರ್ನಾಟಕದ ಗಡಿಗೆ ಹತ್ತಿರವಿರುವ, ಮಹಾರಾಷ್ಟ್ರದ ಪಂಢರಪುರದಲ್ಲಿದೆ. ವಿಠ್ಠಲನ ದಂತಕಥೆಗಳು, ಈ ದೇವರನ್ನು ಪಂಢರಪುರಕ್ಕೆ ಕರೆತಂದನೆಂದು ನಂಬಲಾದ, ಅವನ ಭಕ್ತ ಪುಂಡಲೀಕನ ಸುತ್ತ, ಮತ್ತು ವಾರಕರೀ ಮತದ ಕವಿ-ಸಂತರ ಒಬ್ಬ ಸಂರಕ್ಷಕನಾಗಿ ವಿಠ್ಠಲನ ಪಾತ್ರದ ಸುತ್ತ ಕೇಂದ್ರೀಕೃತವಾಗಿವೆ.

ಸಂಚಿಕೆ ೫೭

ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ, ಜ್ವಾಲಾಮುಖಿ, ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೇ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.

ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು" ಹಾಗು "ನಾಮಿ"( 波) ಎಂದರೆ "ಅಲೆ" ಎಂಬ ಅರ್ಥ ಕೊಡುತ್ತದೆ. ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗು ಬಹುವಚನ ಎರಡಕ್ಕೂ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು" ಎಂದೂ ಇಂಗ್ಲಿಷಿನಲ್ಲಿ "tsunamis" ಕರೆಯುತ್ತಾರೆ. ಅಲ್ಲಿಯ ಮೀನುಗಾರರು ಅಲೆಗಳ ಬಗ್ಗೆ ಹೆಚ್ಚೇನು ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದ್ದಂತೆ. ಸುನಾಮಿಯು ಸಾಗರದ ತೀರಾ ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ) ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್ ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ ಇಲ್ಲ.

ಸಂಚಿಕೆ ೫೮

ಶಿಲೀಂಧ್ರ ವು (pronounced /ˈfʌŋɡəs/) ಬಹುವಚನ (ಶಿಲೀಂಧ್ರಗಳು) ಯುಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಮಶ್ರೂಮ್‌ಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು (pronounced /ˈfʌndʒaɪ/ ಅಥವಾ /ˈfʌŋɡaɪ/) ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಭಿನ್ನತೆಗಳು ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು ) ಯುಮೈಕೋಟಾ (ನಿಜವಾದ ಫಂಗಿ ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ.

ಸಂಚಿಕೆ ೫೯
ಪ್ರಿಯ ಕನ್ನಡ ವಿಕಿಪೀಡಿಯನ್ನರೆ,

ಜೂನ್ ೧೨ ರಂದು ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.

ಸಂಚಿಕೆ ೬೩
ಕಥಕ್: ಬಹು ಪ್ರಾಚೀನ ಕಾಲದಿಂದ ಭಾರತದಲ್ಲಿನ ದೇವಾಲಯಗಳಲ್ಲಿ ದೇವತಾ ಪ್ರೀತ್ಯರ್ಥವಾಗಿ ದೇವದಾಸಿಯರಿಂದ ನೆರವೇರುತ್ತಿದ್ದ ನೃತ್ಯಕ್ಕೆ ಕಥಕ್ ಎಂದೂ ಅಂಥ ನೃತ್ಯವನ್ನು ಕಲಿಸಿಕೊಡುತ್ತಿದ್ದ ಒಂದು ವರ್ಗದ ಬ್ರಾಹ್ಮಣ ಉಪಾಧ್ಯಾಯರಿಗೆ ಕಥಕ ಅಥವ ಕಥಿಕ ಎಂದೂ ಹೆಸರಿದೆ. ಉತ್ತರ ಹಿಂದೂಸ್ತಾನದಲ್ಲಿನ ಲಕ್ನೋ ಮತ್ತು ಜಯಪುರಗಳಲ್ಲಿ ಈ ನೃತ್ಯ ಕ್ರಮೇಣ ಅಭಿವೃದ್ಧಿಗೆ ಬಂದು ಪೂಜ್ಯಸ್ಥಾನವನ್ನು ಪಡೆಯಿತಲ್ಲದೆ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆಯಿತು.ಇದಕ್ಕೆ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಭಕ್ತಿಪಂಥವೂ ಪ್ರಭಾವ ಬೀರಿತು. ಕಥಕ್ ಎಂಬ ಹೆಸರು ಸಂಸ್ಕೃತದ ಕಥಾ ಎಂಬ ಶಬ್ದದಿಂದ ಬಂದಿದೆ. ಕಥಕ ಎಂದರೆ ಕಥೆ ಹೇಳುವವ ಎಂದು ಅರ್ಥವಿದೆ.ಕಥಕ್ ನೃತ್ಯಕ್ಕೆ ಲಕ್ನೋ,ಜಯಪುರ ಮತ್ತು ವಾರಣಾಸಿ ಘರಾಣಾಗಳು ಮುಖ್ಯವಾಗಿದೆಯಾದರೂ ರಾಯ್‍ಘರ್ ಘರಾಣವೂ ತನ್ನದೇ ಆದ ಛಾಪು ಮೂಡಿಸಿದೆ.

(ಹೆಚ್ಚಿನ ಮಾಹಿತಿ...)

ಸಂಚಿಕೆ ೬೪
ಸದ್ಗುಣಶೀಲ ಪಚ್ಚ (ಹಸಿರು)ಪಾತ್ರದಲ್ಲಿರುವ ಕಥಕ್ಕಳಿ ಕಲಾವಿದ

ಕಥಕ್ಕಳಿ (ಮಲಯಾಳಂ:കഥകളി)ಯು ಅತ್ಯಂತ ಶೈಲೀಕೃತ ಶಾಸ್ತ್ರೀಯ ಭಾರತೀಯ ನೃತ್ಯ-ನಾಟಕವಾಗಿದೆ. ಪಾತ್ರಧಾರಿಗಳ ಆಕರ್ಷಕ ಅಲಂಕಾರ, ವೈಭವವಾದ ವೇಷಭೂಷಣ, ವಿಶದವಾದ ಭಾವಭಂಗಿಗಳು ಮತ್ತು ಅತಿ ಸ್ಪಷ್ಟವಾದ ಆಂಗಿಕ ಚಲನೆಗಳು ಹಿನ್ನೆಲೆ ಸಂಗೀತ ಮತ್ತು ಪೂರಕವಾದ ತಾಳವಾದ್ಯದೊಂದಿಗೆ ಹದವಾಗಿ ಬೆರೆತಿರುವಂತೆ ಪ್ರಸ್ತುತಪಡಿಸಲಾಗುತ್ತದೆ. ಭಾರತದ ಇಂದಿನ ಕೇರಳರಾಜ್ಯದಲ್ಲಿ ಸುಮಾರು 17ನೇ ಶತಮಾನದಲ್ಲಿ ಅದು ಹುಟ್ಟಿತು. ಕಾಲಕ್ರಮೇಣ ಸುಧಾರಿತ ನೋಟಗಳು, ಪರಿಷ್ಕೃತ ಭಾವಭಂಗಿಗಳು ಮತ್ತು ಹೆಚ್ಚುವರಿ ವಿಷಯವಸ್ತುವಿನೊಂದಿಗೆ, ಅಲಂಕೃತ ಹಾಡುಗಾರಿಕೆ ಹಾಗೂ ನಿಖರವಾದ ತಾಳಮದ್ದಲೆಯೂ ಸೇರಿಕೊಂಡು, ಮತ್ತಷ್ಟು ವಿಕಸನಗೊಂಡಿತು. ಕಥಕ್ಕಳಿಯು ಅದಕ್ಕಿಂತ ಮೊದಲಿನ ನೃತ್ಯ-ನಾಟಕ ರೂಪವಾದ ರಾಮನಾಟ್ಟಂನಿಂದ ವ್ಯುತ್ಪನ್ನಗೊಂಡಿತು, ಜೊತೆಗೆ ಕೃಷ್ಣನಾಟ್ಟಂನಿಂದ ಕೆಲವು ತಂತ್ರಗಳನ್ನು ತೆಗೆದುಕೊಂಡಿತು. "ಆಟ್ಟಂ" ಎಂದರೆ ಅಭಿನಯಿಸುವುದು ಎಂದರ್ಥ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಥಕ್ಕಳಿಗೆ ಮೊದಲಿನ ಈ ಎರಡೂ ಸ್ವರೂಪಗಳು ಹಿಂದೂ ದೇವರುಗಳಾದ ರಾಮ ಮತ್ತು ಕೃಷ್ಣನ ಕಥೆಗಳನ್ನು ಪ್ರಸ್ತುತಪಡಿಸುವುದಕ್ಕೆ ಸಂಬಂಧಿಸಿದ್ದವು. (ಹೆಚ್ಚಿನ ಮಾಹಿತಿ...)

ಸಂಚಿಕೆ ೬೫
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
ಯಕ್ಷ
  1. ಪ್ರಸಂಗ:
  2. ಪಾತ್ರಧಾರಿಗಳು:
  3. ವೇಷಭೂಷಣ:
  4. ಭಾಗವಂತಿಕೆ:
  5. ಮಾತುಗಾರಿಕೆ:
  6. ಹಿಮ್ಮೇಳ:

(ಹೆಚ್ಚಿನ ಮಾಹಿತಿ...)

ಸಂಚಿಕೆ ೬೬
ಕನ್ನಡ ಅಕ್ಷರಮಾಲೆ 'ಅ'

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.

ಸಂಚಿಕೆ ೬೭

ತುಳು ಭಾರತ ದೇಶದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆರ್ )ಎಂದು ಕರೆ ಯುತ್ತಾರೆ. ಹಿಂದೆ ತುಳು ಬ್ರಾಹ್ಮಣರು ತಿಗಳಾರಿ ಲಿಪಿ ಎಂಬ ಲಿಪಿಯನ್ನು ಉಪಯೋಗಿಸುತ್ತಿದರು. ಈ ಲಿಪಿಯ ಮುಖ್ಯಭಾಷೆ ಸಂಸ್ಕೃತ, ಕಾಲಕ್ರಮೇಣ ಅದರ ಬಳಕೆ ಇಲ್ಲವಾಗಿದೆ.ಈ ಲಿಪಿಯ ಬಗ್ಗೆ ತಿಳಿದಿರುವವರು ಈಗ ಕಡಿಮೆ. ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ.ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ. ಆದರೆ ತುಳುಭಾಷೆಯಲ್ಲಿ ರಚಿತವಾಗಿರುವ ಕೃತಿಗಳ ಲಭ್ಯತೆ ಕಡಿಮೆ ಇರುವುದರಿಂದ ತುಳು ಭಾಷೆಯ ಪ್ರಾಚೀನತೆಯನ್ನು ಅಂದಾಜು ಮಾಡುವುದು ಕಷ್ಟ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬಯಿ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳು ವರು ಇದ್ದಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ.